ಮೈಸೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಜನರು ರಕ್ಷಣೆ ಇಲ್ಲದೇ ಭಯದಿಂದ ಬದುಕುವ ಸ್ಥಿತಿ ಬಂದಿದೆ ಎಂಬ ವಿಪಕ್ಷಗಳ ಸಲಹೆಯನ್ನು ಸ್ವೀಕರಿಸಿ ತಿದ್ದಿಕೊಳ್ಳುವ ಸೌಜನ್ಯವೂ ಸರ್ಕಾರಕ್ಕೆ ಇಲ್ಲ ಎಂದ ಮೇಲೆ, ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಸರಣಿ ಹತ್ಯೆ ಪ್ರಕರಣ ನಡೆಯುತ್ತಿದೆ. ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರೆ ಸಿದ್ದರಾಮಯ್ಯ ಅವರ ಕಾಲದಲ್ಲಿಯೂ ಕೊಲೆಗಳು ನಡೆದಿತ್ತು, ನಮ್ಮ ಕಾಲದಲ್ಲಿಯೂ ನಡೆಯುತ್ತಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಯಾವುದೇ ಸರ್ಕಾರ ನಡೆದುಕೊಳ್ಳುವ ರೀತಿಯೇ ಎಂದು ಪ್ರಶ್ನಿಸಿದರು.
ಇದೇ ವೇಳೆ ‘ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ಕಲ್ಲು ಹೊಡೆಯಬಹುದಿತ್ತು’ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದು ಸಂಸದರ ಬೇಜವಾಬ್ದಾರಿ ಹೇಳಿಕೆ. ಕಾಂಗ್ರೆಸ್ ಸರ್ಕಾರವಾಗಿದ್ರೆ ಕಲ್ಲು ಹೊಡೆಯಬಹುದಿತ್ತು ಎನ್ನುತ್ತಿದ್ದಾರೆ, ಈಗ ಇವರ ಸರ್ಕಾರದಲ್ಲಿ ಇಂತಹ ಘಟನೆ ನಡೆದಿದೆಯಲ್ಲ… ಏನು ಮಾಡಬೇಕು? ಕೊಳಕು ಮೊಟ್ಟೆ, ಚಪ್ಪಲಿಯಲ್ಲಿ ಹೊಡೆಯಬೇಕಾ…? ಎಂದು ಕೆಂಡಾಮಂಡಲರಾದರು.
ಚಪ್ಪಲಿ ಪದ ಬಳಕೆ ಮಾಡಿದ್ದಕ್ಕೆ ತಕ್ಷಣ ಎಚ್ಚೆತ್ತ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಲೇ ಕ್ಷಮೆ ಯಾಚಿಸಿದ್ದು, ಮಾತನಾಡುವ ಬರದಲ್ಲಿ ಚಪ್ಪಲಿ ಶಬ್ಧ ಬಳಸಿದ್ದಕ್ಕೆ ಕ್ಷಮೆಯಿರಲಿ, ಅದನ್ನೇ ದೊಡ್ಡದು ಮಾಡುವುದು ಬೇಡ ಎಂದು ಹೇಳಿದ ಪ್ರಸಂಗವೂ ನಡೆಯಿತು.