ನವದೆಹಲಿ: ಅಡುಗೆ ಎಣ್ಣೆ ದರ ಇಳಿಕೆಗೆ ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ವಿವಿಧ ಕ್ರಮ ಕೈಗೊಂಡ ಕಾರಣ ಅಡುಗೆ ಎಣ್ಣೆ ದರ ಪ್ರತಿ ಲೀಟರ್ ಗೆ 20 ರಿಂದ 30 ರೂಪಾಯಿವರೆಗೆ ಇಳಿಕೆಯಾಗಿದೆ.
5 ತಿಂಗಳ ನಂತರ ಇದೇ ಮೊದಲ ಬಾರಿಗೆ ಉಕ್ರೇನ್ ನಿಂದ ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಳ್ಳಲು ಭಾರತ ಸಜ್ಜಾಗಿದ್ದು, ದರದಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಸೆಪ್ಟಂಬರ್ ನಿಂದ ಸೂರ್ಯಕಾಂತಿ ಎಣ್ಣೆ ಆಮದು ಪ್ರಕ್ರಿಯೆ ಆರಂಭವಾಗಲಿದೆ ಎಂದು ಮುಂಬೈ ಮೂಲದ ಬ್ರೋಕರ್ ಮತ್ತು ಟ್ರೇಡರ್ ಸಂಸ್ಥೆ ಸನ್ ವಿನ್ ಗ್ರೂಪ್ ಮಾಹಿತಿ ನೀಡಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ಕಾರಣ ಏಪ್ರಿಲ್ ನಿಂದ ಸೂರ್ಯಕಾಂತಿ ಎಣ್ಣೆ ಆಮದು ಸ್ಥಗಿತಗೊಳಿಸಲಾಗಿತ್ತು. ವಿಶ್ವದ ಅತಿ ದೊಡ್ಡ ಖಾದ್ಯ ತೈಲ ಆಮದು ರಾಷ್ಟ್ರವಾದ ಭಾರತ ಉಕ್ರೇನ್ ನೊಂದಿಗೆ ಮತ್ತೆ ತೈಲ ವ್ಯವಹಾರ ಮುಂದುವರಿಸಲಿದೆ. ಸುಮಾರು 60 ಸಾವಿರ ಟನ್ ಗೆ ಎಣ್ಣೆ ಆಮದು ಮಾಡಿಕೊಳ್ಳಬಹುದು ಎನ್ನಲಾಗಿದೆ.