ಬಿಹಾರದ ಶರೀಫ್ ನಗರದಲ್ಲಿ ಹಾವು ಕಚ್ಚಿಸಿಕೊಂಡ ವ್ಯಕ್ತಿಯೊಬ್ಬ ಆ ಹಾವನ್ನು ಹಿಡಿದು ಆಸ್ಪತ್ರೆಗೆ ತಂದಿದ್ದಾನೆ. ಹಾವಿನೊಂದಿಗೆ ಬಂದ ಸುರೇಂದ್ರ ಪ್ರಸಾದ್‌ನನ್ನು ನೋಡಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ದಂಗಾಗಿ ಹೋಗಿದ್ದಾರೆ.
ತನಗೆ ಕಚ್ಚಿದ ಹಾವನ್ನು ಸೆರೆಹಿಡಿದ ಸುರೇಂದ್ರ ಅದನ್ನು ಹೊತ್ತುಕೊಂಡು ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರ ಮುಂದೆ ಹಾಜರುಪಡಿಸಿದ್ದಾನೆ. ಹಾವನ್ನು ಗುರುತಿಸಿ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಲು ಸಹಾಯವಾಗಲಿ ಅನ್ನೋ ಉದ್ದೇಶದಿಂದ ಅದನ್ನಾತ ತಂದಿದ್ದ.
ಸುರೇಂದ್ರ ಪ್ರಸಾದ್ ಹಾವನ್ನು ಹೊರತೆಗೆಯುತ್ತಿದ್ದಂತೆ ಆಸ್ಪತ್ರೆಯಲ್ಲಿ ಗದ್ದಲವೇ ಉಂಟಾಯ್ತು. ಶುಶ್ರೂಷಕ ಸಿಬ್ಬಂದಿ ಹಾಗೂ ರೋಗಿಗಳು ಹೊರಗೆ ಓಡಿ ಬಂದರು. ನಂತರ ಹಾವನ್ನು ಮತ್ತೆ ಹಿಡಿದು ಚೀಲಕ್ಕೆ ಹಾಕಲಾಯಿತು. ಹೊಲದಲ್ಲಿ ಕೆಲಸ ಮಾಡ್ತಿದ್ದಾಗ ಸುರೇಂದ್ರ ಕಾಲಿಗೆ ಹಾವು ಕಚ್ಚಿದೆ. ಹಾವು ಕಚ್ಚಿದೆ ಅಂತಾ ಹೆದರಿ ಕೂರದೇ ಆತ ಅದನ್ನು ಹಿಡಿದಿದ್ದಾನೆ.
ಅದು ವಿಷಪೂರಿತ ಹಾವಲ್ಲ ಎಂದು ಅನುಮಾನವಿತ್ತು, ಆದರೂ ಅದನ್ನು ಹಿಡಿದುಕೊಂಡು ಹೋದೆ. ಆರೋಗ್ಯವು ಮಧ್ಯರಾತ್ರಿ ಹದಗೆಟ್ಟಾಗ, ಕುಟುಂಬ ಸದಸ್ಯರು ನನ್ನನ್ನು ಸದರ್ ಆಸ್ಪತ್ರೆಗೆ ಕರೆದೊಯ್ದರು. ಹಾವು ಕಚ್ಚಿದೆ ಎಂದಾಗ ವೈದ್ಯರು ತಕ್ಷಣ ಯಾವ ಹಾವು ಎಂದು ಕೇಳಿದರು. ನಂತರ ನಾನು ಚೀಲದಿಂದ ಹಾವನ್ನು ಎಳೆದು ಅವರ ಮೇಜಿನ ಮೇಲೆ ಇಟ್ಟೆ. ವೈದ್ಯರು ಹಾವನ್ನು ಗುರುತಿಸಿ ಅದರ ಪ್ರಕಾರ ನನಗೆ ಚಿಕಿತ್ಸೆ ನೀಡುತ್ತಾರೆ ಎಂದು ನಾನಂದುಕೊಂಡಿದ್ದೆ. ಆಸ್ಪತ್ರೆಯಲ್ಲಿ ಯಾರನ್ನೂ ಹೆದರಿಸುವ ಉದ್ದೇಶ ನನಗಿಲ್ಲ ಅಂತಾ ಸುರೇಂದ್ರ ಹೇಳಿದ್ದಾನೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗ್ತಿದೆ.