ದೇಶಾದ್ಯಂತ ಮಳೆ ಎಡಬಿಡದೇ ಸುರಿಯುತ್ತಿದ್ದು, ಕೆಲವೆಡೆ ಜನ ಜೀವನ ಅಸ್ತವ್ಯಸ್ಥವಾಗುತ್ತಿದೆ. ಅಸ್ಸಾಂ ಮತ್ತು ಗುಜರಾತ್ನಲ್ಲಿ ಭಾರಿ ಪ್ರವಾಹ ಉಂಟಾಗಿದ್ದರೆ, ಅಮರನಾಥದಲ್ಲಿ ಮೇಘಸ್ಫೋಟವಾಗಿ ಜೀವಹಾನಿಯಾಗಿತ್ತು.
ಜುಲೈ 25ರಂದು ಸುರಿದ ಮಳೆಯಿಂದಾಗಿ ಜೋಧ್ಪುರದಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಕಾರೊಂದು ಕೊಚ್ಚಿ ಹೋಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೋಧ್ಪುರದ ಮಾರುಕಟ್ಟೆ ಪ್ರದೇಶದ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ನೀಲಿ ಬಣ್ಣದ ಕಾರನ್ನು ನೀರು ಎಳೆದುಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ನೀರಿನ ರಭಸ ನೋಡಿ ಕಾರಿನ ರಕ್ಷಣೆಗೂ ಯಾರೂ ಮುಂದಾಗಿಲ್ಲ.
ಅಲ್ಲಿದ್ದ ಕೆಲವರು ಕಾರಿನ ಪರಿಸ್ಥಿತಿ ನೋಡಿ ಮರುಕದಿಂದ ಪ್ರತಿಕ್ರಿಯೆ ನೀಡಿದ್ದಾರೆ. ಕಾರು ನೀರಿನ ರಭಸಕ್ಕೆ ಹಿಮ್ಮುಖವಾಗಿ ಕ್ಷಣಾರ್ಧದಲ್ಲಿ ಬಹಳ ದೂರ ಸಾಗಿತ್ತು. ನೆಟ್ಟಿಗರು ವಿಡಿಯೋ ನೋಡಿ ತಮ್ಮದೇ ಧಾಟಿಯಲ್ಲಿ ಕಾಮೆಂಟ್ ಮಾಡಿದ್ದಾರೆ.