ಏರುಗತಿಯ ರಸ್ತೆಯಲ್ಲಿ ಲಗ್ಗೇಜ್ ತಳ್ಳುಗಾಡಿಯನ್ನು ಎಳೆಯಲು ಪರದಾಡುತ್ತಿದ್ದ ಕೂಲಿ ಕಾರ್ಮಿಕನ ಪರಿಸ್ಥಿತಿ ನೋಡಿ ವ್ಯಕ್ತಿಯೊಬ್ಬ ನೆರವಿಗೆ ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
ಕೂಲಿ ಕಾರ್ಮಿಕನು ನೀರಿನ ಬಾಟಲ್ಗಳಿರುವ ತಳ್ಳುಗಾಡಿಯನ್ನು ಎಳೆಯಲು ಸಾಕಷ್ಟು ಶ್ರಮ ಹಾಕುತ್ತಿದ್ದ. ತಲೆ ಬಗ್ಗಿಸಿ ತನ್ನ ಶ್ರಮ ಎಲ್ಲವನ್ನೂ ಹಾಕಿದರೂ ಗಾಡಿ ಮುಂದೆ ಹೋಗುತ್ತಿರಲಿಲ್ಲ. ಇದೆ ವೇಳೆ ಅದೇ ದಾರಿಯಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಬಂದ ತಂದೆ, ತನ್ನ ಕೈಯಲ್ಲಿದ್ದ ವಸ್ತುವನ್ನು ಮಕ್ಕಳ ಕೈಗೆ ಇಟ್ಟು ತಾನು ತಳ್ಳುಗಾಡಿಯನ್ನು ಹಿಂಬದಿಯಿಂದ ತಳ್ಳುತ್ತಾನೆ.
ಇಷ್ಟುಹೊತ್ತು ಎಳೆಯಲು ಕಷ್ಟವಾಗಿದ್ದು, ಈಗ ಏಕಾಏಕಿ ಸರಾಗವಾಗಿದ್ದು ಹೇಗೆ ಎಂದು ಆ ಕೂಲಿ ಕೂಡ ಹಿಂದಿರುಗಿ ಆಶ್ಚರ್ಯದಿಂದ ನೋಡುತ್ತಾನೆ.
ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಪೋಸ್ಟ್ ಮಾಡಿದ್ದರು, 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಜೀವನದಲ್ಲಿ ಒಬ್ಬರಿಗೊಬ್ಬರು ಸ್ವಲ್ಪ ಸಹಾಯ ಮಾಡಿದರೆ ಎಲ್ಲರಿಗೂ ಜೀವನ ಸುಲಭವಾಗುತ್ತದೆ ಎಂಬ ಸಂದೇಶದೊಂದಿಗೆ ಅವನೀಶ್ ಶರಣ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಕಷ್ಟದಲ್ಲಿದ್ದರಿಗೆ ಪ್ರತಿಫಲಾಪೇಕ್ಷೆ ಇಲ್ಲದೇ ನೆರವಾಗಬೇಕು ಎಂದು ತಂದೆಯು ಮಕ್ಕಳಿಗೂ ಪಾಠ ಮಾಡಿದಂತೆಯೂ ಇತ್ತು ಆ ಕ್ಷಣ.