ಕಳೆದ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯ ಮೇಲಿನಪೇಟೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪೊಲೀಸರು ಬೆಳ್ಳಾರೆಯಲ್ಲಿ ಐವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಹಂತಕರು ನಿನ್ನೆ ಬೆಳಿಗ್ಗೆಯಿಂದಲೇ ಪ್ರವೀಣ್ ಅವರ ಕೋಳಿ ಅಂಗಡಿ ಸುತ್ತಮುತ್ತ ಅಡ್ಡಾಡ್ಡಿದ್ದರು ಎಂದು ಹೇಳಲಾಗಿದ್ದು, ಅಲ್ಲದೇ ವಾರದ ಹಿಂದೆ ನಡೆದಿದ್ದ ಮಸೂದ್ ಕೊಲೆ ಸಂದರ್ಭದಲ್ಲಿ ಸದ್ಯದಲ್ಲೇ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಕೆಲವರು ಮಾತನಾಡಿದ್ದ ವಿಷಯವೂ ಪೊಲೀಸರಿಗೆ ತಿಳಿದುಬಂದಿದೆ. ಹೀಗಾಗಿ ಈಗ ಶಂಕಿತರ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಹತ್ಯೆ ಮಾಡಿದ ಪ್ರಮುಖ ಆರೋಪಿಗಳು ಕೇರಳಕ್ಕೆ ಪರಾರಿಯಾಗಿರಬೇಕೆಂಬ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಕೇರಳ ಪೊಲೀಸರೊಂದಿಗೆ ರಾಜ್ಯದ ಪೊಲೀಸರು ನಿಕಟ ಸಂಪರ್ಕದಲ್ಲಿದ್ದಾರೆ. ಶೀಘ್ರದಲ್ಲೇ ಅವರುಗಳನ್ನೂ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.