ಇತ್ತೀಚಿನ ದಿನಗಳಲ್ಲಿ ಚಿಕ್ಕ ಹುಡುಗರು ಕ್ಷುಲ್ಲಕ ಕಾರಣಕ್ಕೆಲ್ಲ ಜೀವ ಕಳೆದುಕೊಳ್ಳುತ್ತಿದ್ದಾರೆ. ಪೋಷಕರು ಬುದ್ಧಿ ಮಾತು ಹೇಳಿದರೂ ಕಷ್ಟ ಎನ್ನುವಂತಹ ಪರಿಸ್ಥಿತಿ ಬಂದಿದೆ. ಇಂಥವುದೇ ಒಂದು ಪ್ರಕರಣದಲ್ಲಿ ಬಾಲಕ ನೇಣಿಗೆ ಶರಣಾಗಿದ್ದಾನೆ.
ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದಿದ್ದು, ರಘುನಾಥ್ ಪ್ರಸಾದ್ ಗುಪ್ತ ಎಂಬ ರೈಲ್ವೆ ಉದ್ಯೋಗಿ ತಮ್ಮ ಇಬ್ಬರು ಮಕ್ಕಳ ಪೈಕಿ ಒಬ್ಬ ಸದಾಕಾಲ ಮೊಬೈಲ್ ಹಾಗೂ ಕಂಪ್ಯೂಟರ್ನಲ್ಲೇ ಕಾಲ ಕಳೆಯುತ್ತಿದ್ದಕ್ಕೆ ಬೇಸರಗೊಂಡಿದ್ದರು.
9ನೇ ತರಗತಿಯ ಈ ವಿದ್ಯಾರ್ಥಿ ಈ ಕಾರಣಕ್ಕೆ ವಿದ್ಯಾಭ್ಯಾಸದಲ್ಲೂ ಹಿಂದುಳಿದಿದ್ದ. ಹೀಗಾಗಿ ರಘುನಾಥ್ ಪ್ರಸಾದ್ ಗುಪ್ತ ಆತನಿಗೆ ಒಂದಷ್ಟು ಬುದ್ಧಿ ಮಾತು ಹೇಳಿ ಬೈದಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಬಾಲಕ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ.
ಮಗ ಸಿಟ್ಟು ಮಾಡಿಕೊಂಡಿದ್ದಾನೆ ಎಂದು ತಂದೆ ಸುಮ್ಮನಾಗಿದ್ದಾರೆ. ಬೆಳಗ್ಗೆ ಆತನ ರೂಮಿನ ಬಾಗಿಲು ತಟ್ಟಿದರೂ ತೆರೆದಿಲ್ಲ. ಕಡೆಗೆ ಕಿಟಕಿ ಮೂಲಕ ಇಣುಕಿ ನೋಡಿದಾಗ ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.