ಕಳೆದ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯ ಮೇಲಿನಪೇಟೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆಯಾಗಿದ್ದು, ಇದರ ಬೆನ್ನಲ್ಲೇ ಪ್ರವೀಣ್ ಅವರ ಮೃತದೇಹದ ಅಂತಿಮ ದರ್ಶನಕ್ಕೆ ಬಿಜೆಪಿಯ ಯಾವುದೇ ರಾಜ್ಯ ನಾಯಕರು ಆಗಮಿಸದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಕಾರ್ಯಕರ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಿಜೆಪಿ ಮುಖಂಡರೊಬ್ಬರ ಕೊಲೆಯಾಗಿದ್ದರೂ ಸಹ ಸಚಿವರಾಗಲಿ, ಶಾಸಕರಾಗಲಿ ಬಾರದಿರುವುದಕ್ಕೆ ಕಾರ್ಯಕರ್ತರು ಕಿಡಿ ಕಾರುತ್ತಿದ್ದು, ಇಂತವರನ್ನು ನಂಬಿ ಕುಟುಂಬ ಮರೆತು ಪಕ್ಷ, ಸಂಘಟನೆ ಎಂದು ನಿಮ್ಮ ಸಮಯ ಹಾಳು ಮಾಡಿಕೊಳ್ಳಬೇಡಿ, ಬಿಜೆಪಿ ನಾಯಕರು ಚುನಾವಣೆಯಲ್ಲಿನ ತಮ್ಮ ಗೆಲುವಿಗಾಗಿ ಮಾತ್ರ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಾರೆ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಸ್ಥಳಕ್ಕೆ ಸಚಿವ, ಶಾಸಕರು ಭೇಟಿ ನೀಡದಿರುವುದಕ್ಕೆ ಪೊಲೀಸರು ನೀಡಿರುವ ಸಲಹೆಯೇ ಕಾರಣ ಎಂಬ ಮಾತುಗಳೂ ಸಹ ಕೇಳಿ ಬರುತ್ತಿದ್ದು, ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆಯಿಂದ ಜನ ಆಕ್ರೋಶಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂದು ಹೇಳಿದ್ದಾರೆನ್ನಲಾಗಿದೆ.