ಶಿವಮೊಗ್ಗ: ಸಾಲ ಪಾವತಿಸುವಂತೆ ಹೇಳಿದ್ದಕ್ಕೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಘದ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ದಾನವಾಡಿಯಲ್ಲಿ ನಡೆದಿದೆ.
ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ದಾನವಾಡಿಯ ಕರಿಯಮ್ಮ, ಪ್ರೇಮಾ, ಶಾರದಮ್ಮ ಅವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ದಾನವಾಡಿಯಲ್ಲಿ ಅಂಗಡಿಯೊಂದರ ಎದುರು ನಿಂತಿದ್ದ ಬಸವರಾಜಪ್ಪ ಮತ್ತು ಮಂಜುನಾಥ ಅವರಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘಕ್ಕೆ ಕಟ್ಟಬೇಕಿರುವ ಸಾಲದ ಹಣವನ್ನು ಪಾವತಿಸುವಂತೆ ಕೇಳಿಕೊಂಡಿದ್ದಾರೆ. ಕಂತು ಬಾಕಿ ಉಳಿಸಿಕೊಂಡಿದ್ದು, ಹಣ ಕಟ್ಟುವಂತೆ ಕೇಳಿದಾಗ ಮಾತಿಗೆ ಮಾತು ಬೆಳೆದು ಇಬ್ಬರೂ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟೀ ಕುಡಿದ ಹಣ ಕೇಳಿದ್ದಕ್ಕೆ ವ್ಯಾಪಾರಿ ಮೇಲೆ ಹಲ್ಲೆ:
ಟೀ ಕುಡಿದ ಹಣ ಕೇಳಿದ್ದಕ್ಕೆ ಬೀದಿ ಬದಿ ಅಂಗಡಿ ಮಾಲೀಕನ ಮೇಲೆಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ. ಗ್ರಾಮದಲ್ಲಿ ವ್ಯಾಪಾರಿ ನಾಗಾನಂದ್ ಮೇಲೆ ಹಲ್ಲೆ ಮಾಡಲಾಗಿದೆ. ಕೇಶವ ಎಂಬಾತ ಟೀ ಕುಡಿದ ಹಣ ಕೊಡದೇ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ನಾಗಾನಂದರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಳೆಹೊನ್ನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.