ಬೆಂಗಳೂರು: ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಯೋಜನೆಗಳಿಗೆ ಮಂಜೂರಾದ ಎರಡು ಎಕರೆ ಜಮೀನನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಹೆಸರಿಗೆ ಖಾತೆ ಮಾಡಿ ಕೊಡುವಂತೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ನೀರಾವರಿ ನಿಗಮಕ್ಕೆ ಪತ್ರ ಬರೆದಿದ್ದಾರೆ.
ಶಿವಮೊಗ್ಗದ ಆಲ್ಕೋಳದಲ್ಲಿ ಕರ್ನಾಟಕ ನೀರಾವರಿ ನಿಗಮ ಮಂಜೂರು ಮಾಡಿದ ಎರಡು ಎಕರೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ನೋಂದಣಿ ಮಾಡಿಕೊಡುವಂತೆ ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವುದು ಬಹಿರಂಗವಾಗಿದ್ದು, ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಎಷ್ಟು ಲಜ್ಜೆಗೆಟ್ಟವರಾಗಿರಬಹುದು. ಸಂಸ್ಥೆಗೆ ಮಂಜೂರಾದ ಭೂಮಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಹೆಸರಿನಲ್ಲಿ ನೋಂದಾಯಿಸಲು ಕೇಳಲಾಗುತ್ತಿದೆ. ಬಿಜೆಪಿ ಮತ್ತು ಆರ್.ಎಸ್.ಎಸ್. ದೇಶಾದ್ಯಂತ ಇದೇ ಮಾದರಿಯಲ್ಲಿ ಬಡವರ ದೊಡ್ಡ ಭೂಮಿಯನ್ನು ಕಬಳಿಸುತ್ತಿವೆ. ಬಿಜೆಪಿಯ ಇಂತಹ ದುಷ್ಟ ಭ್ರಷ್ಟತನವನ್ನು ನಾನು ಖಂಡಿಸುತ್ತೇನೆ ಎಂದು ಹರಿಪ್ರಸಾದ್ ಹೇಳಿದ್ದಾರೆ.