ನವದೆಹಲಿ: ಪ್ರತಿಭಟನಾ ನಿರತ ಕಾಂಗ್ರೆಸ್ ನಾಯಕನ ಕೂದಲು ಹಿಡಿದು ಪೊಲೀಸರು ಕಾರ್ ನೊಳಗೆ ತಳ್ಳಿದ ಘಟನೆ ನಡೆದಿದೆ.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಅವರನ್ನು ದೆಹಲಿ ಪೊಲೀಸರು ಕಾರ್ ನೊಳಗೆ ತಳ್ಳುವಾಗ ಈ ಘಟನೆ ನಡೆದಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಪ್ರತಿಭಟನೆಯ ವೇಳೆ ನಡೆದ ದೃಶ್ಯದ ವಿಡಿಯೋ ವೈರಲ್ ಆಗಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಂದು ಎರಡನೇ ಬಾರಿ ಸೋನಿಯಾ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಿಗರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.
ಅಲ್ಲಿ ನೆರೆದಿದ್ದ ಮಾಧ್ಯಮದವರೊಂದಿಗೆ ಮಾತನಾಡಲು ಮುಂದಾದಾಗ ಪೊಲೀಸರು ತಮ್ಮ ಕಾರ್ ನೊಳಗೆ ಶ್ರೀನಿವಾಸ್ ಅವರನ್ನು ತಳ್ಳುವುದು ಕಂಡುಬಂದಿದೆ. ಶ್ರೀನಿವಾಸ್ ಹೊರಕ್ಕೆ ಹೋಗಲು ಪ್ರಯತ್ನಿಸುವಾಗ ಕೆಲವು ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂದಿ ಕಾರ್ ಬಾಗಿಲನ್ನು ಮುಚ್ಚುತ್ತಿರುವುದನ್ನು ವಿಡಿಯೋ ತೋರಿಸಿದೆ.
ಶ್ರೀನಿವಾಸ್ ಅವರನ್ನು ಕಾರ್ ನಲ್ಲಿ ತಳ್ಳುವ ಪ್ರಯತ್ನದಲ್ಲಿ ಒಬ್ಬ ಅಧಿಕಾರಿ ಕುತ್ತಿಗೆ ಹಿಡಿದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಲವು ಬಾರಿ ವಿಡಿಯೋ ಶೇರ್ ಆದ ಕೂಡಲೇ ದೆಹಲಿ ಪೊಲೀಸರು, ಈ ರೀತಿ ವರ್ತಿಸಿದ ಸಿಬ್ಬಂದಿಯನ್ನು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಗುರುತಿಸಿದ ನಂತರ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.