ದಾವಣಗೆರೆ: ಪಕ್ಷದ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ಎಐಸಿಸಿಯಿಂದ ನೋಟೀಸ್ ಜಾರಿಯಾಗಿದ್ದರೂ ಬಗ್ಗದ ಶಾಸಕ ಜಮೀರ್ ಅಹ್ಮದ್ ಮತ್ತೆ ಸಿದ್ದರಾಮಯ್ಯ ಸಿಎಂ ಜಪ ಮಾಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಜಮೀರ್ ಅಹ್ಮದ್, ವಿಪಕ್ಷ ನಾಯಕ ಸಿದ್ದರಾಮಯ್ಯನವರೇ ಸಿಎಂ ಆಗ್ಬೇಕು. ಸಿದ್ದರಾಮಯ್ಯ ಹೊರತುಪಡಿಸಿ ಬೇರೆ ಯಾರೇ ಸಿಎಂ ಆದರೂ ಕೂಡ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಅಭಿವೃದ್ದಿಯಾಗಲ್ಲ. ಅಲ್ಪಸಂಖ್ಯಾತರಿಗಾಗಿ 5,000 ಕೋಟಿ ಮೀಸಲಿಡುವುದಾಗಿ ಹೇಳಿದ್ದಾರೆ. ಮನೆ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಇಂತಹ ನಾಯಕನನ್ನು ನಾವು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದರು.
ಮುಸ್ಲಿಂ ಸಮುದಾಯದ ಬಗ್ಗೆ ಕಾಳಜಿ ಇರುವ ಏಕೈಕ ನಾಯಕ ಎಂದರೆ ಅವರು ಸಿದ್ದರಾಮಯ್ಯ. ಅವರೊಬ್ಬರೆ ಅಲ್ಪಸಂಖ್ಯಾತರ ಪರ ನಿಂತಿರುವ ನಾಯಕ. ಆಹಾರ ಪದ್ಧತಿ ಬಗ್ಗೆ ದೇಶಾದ್ಯಂತ ಸಾಕಷ್ಟು ವಿವಾದವಾಯ್ತು. ಆಗ ಮುಸ್ಲಿಂ ಪರ ನಿಂತಿದ್ದು ಸಿದ್ದರಾಮಯ್ಯ. ಸಿದ್ದರಾಮಯ್ಯ ವಕ್ಫ್ ಗೆ ಕೊಟ್ಟ ಕೊಡುಗೆ ಅಪಾರ. ಶಾಧಿ ಭಾಗ್ಯ, ಅನ್ನ ಭಾಗ್ಯ ಯೋಜನೆ ಜಾರಿ ಮಾಡಿದರು. 200 ಕೋಟಿ ಅನುದಾನವನ್ನು 3,200 ಕೋಟಿಗೆ ಹೆಚ್ಚಳ ಮಾಡಿದರು. ಹೀಗಾಗಿ ಮುಸ್ಲಿಂ ಸಮುದಾಯ ಸಿದ್ದರಾಮಯ್ಯ ಅವರ ಋಣ ತೀರಿಸಬೇಕಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆದರೆ ವಕ್ಫ್ ಬೋರ್ಡ್ ಜಾಗದಲ್ಲಿ ಮನೆ ನಿರ್ಮಿಸುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಎಐಸಿಸಿ ನೋಟೀಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, ನನಗೆ ಯಾವುದೇ ನೋಟಿಸ್ ಬಂದಿಲ್ಲ. ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಇನ್ನು ಡಿ.ಕೆ.ಶಿವಕುಮಾರ್ ನಮ್ಮ ಪಕ್ಷದ ಅಧ್ಯಕ್ಷರು, ದೊಡ್ಡವರು, ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.