ಚೆನ್ನೈ: ಇತ್ತೀಚೆಗೆ ಕಿಕ್ ಬಾಕ್ಸಿಂಗ್ ಸ್ಪರ್ಧೆ ವೇಳೆಯೇ ಕ್ರೀಡಾಪಟು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಕಬಡ್ಡಿ ಪಂದ್ಯಾವಳಿಯಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.
ತಮಿಳುನಾಡಿನ ಕಡಲೂರು ಜಿಲ್ಲೆಯ ಮಂಡಕ್ಕಿ ಗ್ರಾಮದಲ್ಲಿ ನಡೆದಿದ್ದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ವೇಳೆ ಈ ದುರಂತ ಸಂಭವಿಸಿದೆ. 22 ವರ್ಷದ ಬಿಎಸ್ಸಿ ವಿದ್ಯಾರ್ಥಿ ವಿಮಲ್ ರಾಜ್ ಮೃತ ಯುವಕ. ಸೇಲಂ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕ ರಜೆ ಕಳೆಯಲು ಮನೆಗೆ ಬಂದಿದ್ದ. ಮುರಟ್ಟು ಕಾಲೈ ಟಿಂ ಕಬಡ್ಡಿ ತಂಡವನ್ನು ಪ್ರತಿನಿಧಿಸುತ್ತಿದ್ದ.
ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜನೆ ಹಿನ್ನೆಲೆಯಲ್ಲಿ ಪಂದ್ಯದಲ್ಲಿ ಭಾಗವಹಿಸಿದ್ದ ವಿಮಲ್ ರಾಜ್, ಎದುರಾಳಿ ತಂಡದ ಆಟಗಾರನ ಮೇಲೆ ರೈಡಿಂಗ್ ಹೋದಾಗ ಹೃದಯಾಘಾತಕ್ಕಿಡಾಗಿದ್ದಾನೆ. ಕಬಡ್ಡಿ ಅಖಾಡದಲ್ಲಿಯೇ ಕುಸಿದು ಬಿದ್ದಿದ್ದಾನೆ. ಮೇಲೇಳಲು ಸಾಧ್ಯವಾಗದೇ ಕಬಡ್ಡಿ ಕೋರ್ಟ್ ನಲ್ಲೇ ಮಲಗಿದ ವಿಮಲ್ ನನ್ನು ಇತರ ಆಟಗಾರರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪಣರುಟಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಷ್ಟರಲ್ಲಿಯೇ ವಿಮಲ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರು ಕಬಡ್ಡಿ ಆಟಗಾರನ ಸಾವಿನ ಬಗ್ಗೆ ತನಿಖೆ ನಡೆಸಿದ್ದಾರೆ.