ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇಡಿ ವಿಚಾರಣೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರು ಮೌನ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಗೆ ಸ್ಯಾಂಡಲ್ ವುಡ್ ನಟಿ ಭಾವನಾ ಆಗಮಿಸಿದ್ದು, ಕಾರ್ಯಕರ್ತರು ಗರಂ ಆಗಿದ್ದಾರೆ.
ಬೆಂಗಳೂರಿನ ಕಾಂಗ್ರೆಸ್ ಭವನದ ಮುಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನೆ ನಡೆಯುತ್ತಿದ್ದ ವೇದಿಕೆಗೆ ಆಗಮಿಸಿದ ನಟಿ ಭಾವನಾ ಅವರನ್ನು ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ನೇರವಾಗಿ ಪ್ರಶ್ನಿಸಿದ್ದಾರೆ. ಬಿಜೆಪಿಗೆ ಹೋಗಿ ಈಗ ಬಂದಿದ್ದೀರಾ…ಅದು ಅಲ್ಲದೇ ವೇದಿಕೆ ಮೇಲೆ ಮುಂದೆ ಬಂದು ಕೂರಲು ಹೋಗಿದ್ದೀರಾ? ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾರ್ಯಕರ್ತೆಯ ನಡೆಗೆ ಗಲಿಬಿಲಿಯಾದ ಭಾವನಾ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿ, ಬಳಿಕ ಅಸಮಾಧಾನಗೊಂಡಿದ್ದ ಕಾರ್ಯಕರ್ತೆ ಜತೆಯೂ ಮಾತನಾಡಿ ಸಮಾಧಾನ ಪಡಿಸಿದ್ದಾರೆ. ಅಲ್ಲದೇ ತಾನು ಬಿಜೆಪಿಗೆ ಹೋಗಿಲ್ಲ, ಕಾಂಗ್ರೆಸ್ ನಲ್ಲಿಯೇ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ ಪ್ರತಿಭಟನೆ ವೇಳೆ ವೇದಿಕೆಯ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಭಾವನಾ ಅವರಿಗೆ ಮಹಿಳಾ ಕಾರ್ಯಕರ್ತೆಯರು ಅವಕಾಶ ನೀಡಿಲ್ಲ, ಬಳಿಕ ಹಿಂದಿನ ಸಾಲಿನಲ್ಲಿ ಕೆಲ ಸಮಯ ಕುಳಿತು ಬಳಿಕ ಪ್ರತಿಭಟನಾ ಸ್ಥಳದಿಂದಲೇ ನಿರ್ಗಮಿಸಿದ ಘಟನೆ ನಡೆದಿದೆ.