ಶಿವಮೊಗ್ಗ: ಡಿ.ಕೆ. ಶಿವಕುಮಾರ್ ಅವರಿಗೆ ತಾಕತ್ತಿದ್ದರೆ ನನ್ನ ವಿಚಾರಕ್ಕೆ ಸಂಬಂಧಪಟ್ಟಂತೆ ನನಗೆ ಕ್ಲೀನ್ ಚಿಟ್ ನೀಡಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಿ. ಅದರಲ್ಲಿ ಅವರು ಯಶಸ್ವಿಯಾದರೆ ಅವರು ಹೇಳಿದ ಹಾಗೆ ಕೇಳುವೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ. ಶಿವಕುಮಾರ್ ಹುಚ್ಚು ಹುಚ್ಚಾಗಿ ಮಾತನಾಡಬಾರದು. ನನ್ನ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ರೀತಿಯ ತನಿಖೆ ಮಾಡಿಯೇ ಆರೋಪಮುಕ್ತನನ್ನಾಗಿ ಮಾಡಿದ್ದಾರೆ ಎಂದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಾಟ್ಸಾಪ್ ನಲ್ಲಿ ಯಾರೋ ಹಾಕಿದ ಸಂದೇಶ ದಾಖಲೆಯಾಗುವುದಿಲ್ಲ. ನಾಳೆ ಮತ್ಯಾರೋ ಒಬ್ಬ ನನ್ನ ಆತ್ಮಹತ್ಯೆಗೆ ಡಿಕೆಶಿಯೇ ಕಾರಣ ಎಂದು ಹೇಳಿದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಡಿ.ಕೆ. ಶಿವಕುಮಾರ್ ಅವರಿಗೆ ಮೈಮೇಲೆ ಜ್ಞಾನವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸಿಗರು ಟೀಕೆ ಮಾಡುವುದರಲ್ಲಿ ಅರ್ಥವೇ ಇಲ್ಲ. ಡೆತ್ ನೋಟ್ ನೋಡಿದ ಕೂಡಲೇ ಮುಖ್ಯಮಂತ್ರಿಯಿಂದ ಹಿಡಿದು ಗೃಹಮಂತ್ರಿಯವರೆಗೆ ಎಲ್ಲರಿಗೂ ಇದು ಸುಳ್ಳು ಎಂದು ಗೊತ್ತಾಗಿದೆ. ನನ್ನನ್ನು ಸೇರಿದಂತೆ ಆತ್ಮವಿಶ್ವಾಸದಿಂದಲೇ ನಾವು ಇದು ತಪ್ಪು. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದೆವು. ಅದರಂತೆ ಕ್ಲೀನ್ ಚಿಟ್ ಸಿಕ್ಕಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷ ಇದರ ವಿರುದ್ಧ ಪ್ರತಿಭಟನೆ ನಡೆಸಲು ಸಿದ್ಧವಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಈಗ ಯಾವ ಅಸ್ತಿತ್ವವೂ ಉಳಿದಿಲ್ಲ. ಕುತಂತ್ರದ ರಾಜಕಾರಣ ಮಾಡುತ್ತಾ ಬಂದಿರುವ ಕಾಂಗ್ರೆಸ್ ಈ ದೇಶ ಮತ್ತು ರಾಜ್ಯದಿಂದ ನಿರ್ನಾಮವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಲು ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್, ಜಮೀರ್ ಅಹಮ್ಮದ್ ಈ ಮೂವರೇ ಸಾಕು ಎಂದರು.
ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ನನಗೇನೂ ತಿಳಿದಿಲ್ಲ. ಕೇಂದ್ರದ ವರಿಷ್ಠರೇ ಹೇಳಬೇಕು ಎಂದರು.