ಮಂಗಳೂರು: ಮಂಗಳೂರಿನ ಬಲ್ಮಠದ ರಿಸೈಕಲ್-ದಿ- ಲಾಂಚ್ ಪಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳು ತಡರಾತ್ರಿ ಪಾರ್ಟಿ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು ಪಾರ್ಟಿಗೆ ತಡೆಯೊಡ್ಡಿ, ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಇದೀಗ ಈ ಪ್ರಕರಣದ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಪಬ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಮೀಷನರ್ ಶಶಿಕುಮಾರ್, ಪಬ್ ನಲ್ಲಿ ಯುವಕ-ಯುವತಿಯರು ಪಾರ್ಟಿ ನಡೆಸುತ್ತಿದ್ದ ಬಗ್ಗೆ ಮಾಹಿತಿ ತಿಳಿದು ಬಜರಂಗದಳ ಕಾರ್ಯಕರ್ತರು ಪಬ್ ಬಳಿ ಬಂದು ಬೌನ್ಸರ್ ವಿಚಾರಿಸಿದ್ದಾರೆ. ಬಜರಂಗದಳ ಕಾರ್ಯಕರ್ತರು ಪಬ್ ಒಳಗೆ ಹೋಗಿಲ್ಲ, ಯಾವುದೇ ದಾಳಿಯೂ ನಡೆದಿಲ್ಲ. ಬೌನ್ಸರ್, ಪಬ್ ಮ್ಯಾನೇಜರ್ ಗೆ ತಿಳಿಸಿದ್ದಾರೆ. ಮ್ಯಾನೇಜರ್ ಪರಿಶೀಲಿಸಿದಾಗ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ಮಾಡುತ್ತಿರುವುದು ಗೊತ್ತಾಗಿದೆ. ತಕ್ಷಣ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಲಾಗಿದೆ ಎಂದು ಬೌನ್ಸರ್ ತಿಳಿಸಿದ್ದಾರೆ ಎಂದರು.
ಬಲ್ಮಠದ ರಿ-ಸೈಕಲ್ ರೆಸ್ಟೋರೆಂಟ್ ಕಮ್ ಪಬ್ ಬಹಳಷ್ಟು ವರ್ಷಗಳಿಂದಲೂ ಇದೆ. ಬೌನ್ಸರ್ ಹೇಳಿದ ಪ್ರಕಾರ ಸಂಘಟನೆ ಕಾರ್ಯಕರ್ತರು ಪಬ್ ಒಳಗೆ ಹೋಗಿಲ್ಲ. ಹೊರಗಡೆಯೇ ಮಾತನಾಡಿ ಕಳುಹಿಸಲಾಗಿದೆ. ಸಧ್ಯ ಸಿಸಿ ಟಿವಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.