ಬೆಲೆ ಏರಿಕೆ ಎಫೆಕ್ಟ್ ಈಗ ಕಲ್ಯಾಣ ಕರ್ನಾಟಕದ ಶಾಲಾ ಮಕ್ಕಳಿಗೂ ತಟ್ಟಿದೆ. ಬಾಳೆಹಣ್ಣಿನ ದರ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿರುವುದರಿಂದ ಶಾಲಾ ವಿದ್ಯಾರ್ಥಿಗಳಿಗೆ ಬಾಳೆಹಣ್ಣಿನ ಬದಲು ಶೇಂಗಾ ಚಿಕ್ಕಿ ನೀಡಲು ಮೌಖಿಕವಾಗಿ ಸೂಚಿಸಲಾಗಿದೆ.
ಪೌಷ್ಟಿಕಾಂಶ ಹೆಚ್ಚಳಕ್ಕಾಗಿ ಕಲ್ಯಾಣ ಕರ್ನಾಟಕದ ಶಾಲಾ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ಆದರೆ ಇದಕ್ಕಾಗಿ ನಿಗದಿಪಡಿಸಿರುವ ದರಕ್ಕಿಂತ ಮಾರುಕಟ್ಟೆಯಲ್ಲಿ ಬಾಳೆಹಣ್ಣು ದರ ಹೆಚ್ಚಳವಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಪ್ಪಳದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಮುಖ್ಯಸ್ಥರಾದ ಅನಿತಾ, ಬಾಳೆಹಣ್ಣು ದರ ವಿಪರೀತವಾಗಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ ಶೇಂಗಾ ಚಿಕ್ಕಿಯನ್ನು ನೀಡುವಂತೆ ಸೂಚಿಸಲಾಗಿದೆ ಎಂದಿದ್ದಾರೆ.