ಬೆಂಗಳೂರು: ನಿಮ್ಮ ಸಾರ್ವಜನಿಕ ಹೇಳಿಕೆ ಅನಗತ್ಯ ಕೀಳು ಅಭಿರುಚಿಯಿಂದ ಕೂಡಿದೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಎಚ್ಚರಿಕೆಯ ಪತ್ರ ಬರೆದಿದ್ದಾರೆ.
ನಿಮ್ಮಂತಹ ಹಿರಿಯ ನಾಯಕರು ಪಕ್ಷದ ಲಕ್ಷ್ಮಣ ರೇಖೆ ದಾಟಬಾರದು. ನೀವು ಪಕ್ಷದ ಲಕ್ಷ್ಮಣ ರೇಖೆಯೊಳಗೆ ಇರುವುದನ್ನು ನಿರೀಕ್ಷೆ ಮಾಡಿದ್ದೇವೆ. ಅನವಶ್ಯಕ ಹೇಳಿಕೆಯು ವಿವಾದ, ಕಹಿಯಾದ ವಾತಾವರಣ ಸೃಷ್ಟಿಸಿದೆ. ಕಾಂಗ್ರೆಸ್ ಪಕ್ಷ ನಿಮ್ಮಿಂದ ಇಂತಹ ಹೇಳಿಕೆ ನಿರೀಕ್ಷಿಸುವುದಿಲ್ಲ. ನಿಮ್ಮ ಅನವಶ್ಯಕ ಹೇಳಿಕೆಯಿಂದ ತಪ್ಪು ಸಂದೇಶ ರವಾನೆಯಾಗುತ್ತಿದೆ. ಎಲ್ಲ ಜಾತಿ, ಜನಾಂಗ, ಸಮೂಹ ಒಳಗೊಳ್ಳುವುದು ಕಾಂಗ್ರೆಸ್ ಸಿದ್ಧಾಂತವಾಗಿದೆ. ಕಾಂಗ್ರೆಸ್ ಪಕ್ಷದ ಇಂತಹ ಸಿದ್ಧಾಂತದ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸುದೀರ್ಘ ಪತ್ರದ ಮೂಲಕ ಜಮೀರ್ ಅಹಮದ್ ಖಾನ್ ಗೆ ಸುರ್ಜೆವಾಲಾ ಎಚ್ಚರಿಕೆ ನೀಡಿದ್ದಾರೆ.
ಪದೇ ಪದೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದು ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗಳಿಗೆ ತಿರುಗೇಟು ರೂಪದಲ್ಲಿ ಪ್ರತಿಕ್ರಿಯೆ ನೀಡಿದ್ದು ಈ ಬೆಳವಣಿಗೆಗೆ ಕಾರಣವಾಗಿದೆ.
ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಕ್ಕೆ ನಾನು ಸತ್ತಾಗಲೇ ಬಾಯಿ ಮುಚ್ಚಿಸಲು ಸಾಧ್ಯ. ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಮೀರ್ ಹೇಳಿದ್ದರು.
ಅಲ್ಲದೇ ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂದು ಪದೇ ಪದೇ ಹೇಳಿಕೆ ನೀಡಿದ್ದ ಜಮೀರ್ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದರು. ಈ ಮೂಲಕ ಕಾಂಗ್ರೆಸ್ ಬಣ ರಾಜಕೀಯಕ್ಕೆ ಕಿಚ್ಚು ಹಚ್ಚಿದ್ದರು. ಅವರ ವಿರುದ್ಧ ಕ್ರಮಕ್ಕೆ ಶಿಸ್ತು ಸಮಿತಿಗೆ ಡಿ.ಕೆ. ಶಿವಕುಮಾರ್ ಬೆಂಬಲಿಗರು ಒತ್ತಾಯಿಸಿದ್ದರು. ಇವೆಲ್ಲಾ ಬೆಳವಣಿಗೆಗಳ ನಂತರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಪತ್ರ ಬರೆದು ಜಮೀರ್ ಗೆ ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ.