ಹಾವೇರಿ: ನನ್ನ ರಾಜಕೀಯ ಜೀವನ ಆರಂಭವಾಗಲು ಕಾರಣ ಒಕ್ಕಲಿಗರು. ರಾಜಕೀಯಕ್ಕೆ ಬರಲು ಒಕ್ಕಲಿಗ ಗುರುಗಳೇ ಕಾರಣ ಹೊರತು ಮುಸ್ಲಿಂ ಧರ್ಮಗುರುಗಳಲ್ಲ ಎಂದು ಶಾಸಕ ಜಮೀರ್ ಅಹ್ಮದ್ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಜಾತಿ, ಧರ್ಮದವರನ್ನೂ ಬೆಳೆಸುವ ಪಕ್ಷವಾಗಿದೆ. ನಾನು ಈ ಹಿಂದೆಯೇ ಹೇಳಿದ್ದೆ. ನಾನು ರಾಜಕೀಯಕ್ಕೆ ಬರಲು ಕಾರಣ ಒಕ್ಕಲಿಗರು. ಆದಿಚುಂಚನಗಿರಿ ಮಠದ ಶ್ರಿಗಳೇ ನಾನು ರಾಜಕೀಯಕ್ಕೆ ಬರಲು ಕಾರಣ ಎಂದು ಹೇಳಿದ್ದಾರೆ.
ಬೆಳಿಗ್ಗೆಯಿಂದ ಸಂಜೆವರೆಗೂ ನಾನು ಆದಿಚುಂಚನಗಿರಿ ಮಠದಲ್ಲೇ ಇರುತ್ತಿದ್ದೆ. ನಾನು ಬೆಳೆದಿದ್ದು ಮಠದಲ್ಲಿಯೇ. ನನಗೆ ರಾಜಕೀಯ ಜೀವನದ ದಾರಿ ತೋರಿಸಿದ್ದು ಆದಿಚುಂಚನಗಿರಿ ಶ್ರೀಗಳು. ಆದಿಚುಂಚನಗಿರಿ ಮಠದ ಸ್ವಾಮೀಜಿಯವರ ಶಿಷ್ಯ ನಾನು. ಒಂದು ವೇಳೆ ನಾನು ಮಠಕ್ಕೆ ಹೋಗುವುದು ತಡವಾದರೆ ಸ್ವಾಮೀಜಿಯವರು ಫೋನ್ ಮಾಡಿ ಎಲ್ಲಿದ್ದೀಯಾ ಜಮೀರ್ ಎಂದು ಕೇಳುತ್ತಿದ್ದರು. ಸ್ವಾಮೀಜಿಗಳ ಸೂಚನೆಯಂತೆ ನಾನು ಜೆಡಿಎಸ್ ಗೆ ಸೇರ್ಪಡೆಯಾಗಿದ್ದೆ ಎಂದು ತಿಳಿಸಿದ್ದಾರೆ.
ಹಾಗಾಗಿ ನಾನು ಬೆಳೆಯಲು ಕಾರಣ ಮುಸ್ಲಿಂ ಧರ್ಮಗುರುಗಳಲ್ಲ, ಆದಿಚುಂಚನಗಿರಿ ಶ್ರೀಗಳು ಕಾರಣ. ಇನ್ನು ದೇವೇಗೌಡರು ನನ್ನ ರಾಜಕೀಯ ಗುರುಗಳು. 2005ರಲ್ಲಿ ನನ್ನನ್ನು ಗೆಲ್ಲಿಸಿದ್ದು ದೇವೇಗೌಡರು. ರಾಜಕೀಯವಾಗಿ ಬೆಳೆಯಲು ಅವರು ಕಾರಣ ಎಂದು ಹೇಳಿದರು.