ಎಷ್ಟೇ ಪ್ರೀತಿಯಿಂದ ಸಾಕಿದ್ರೂ ಕ್ರೂರ ಪ್ರಾಣಿಗಳ ಸ್ವಭಾವವನ್ನು ಬದಲಾಯಿಸುವುದು ಅಸಾಧ್ಯ ಅನ್ನೋದಕ್ಕೆ ಇದೊಂದು ತಾಜಾ ಉದಾಹರಣೆ. ಅಮೆರಿಕದಲ್ಲಿ 15 ಅಡಿ ಉದ್ದದ ಹಾವೊಂದು ತನ್ನ ಮಾಲೀಕನನ್ನೇ ಕೊಲ್ಲಲು ಯತ್ನಿಸಿದೆ. ಮಾಲೀಕನ ಕತ್ತಿಗೆ ಸುತ್ತಿಕೊಂಡ ಹಾವು ಆತನನ್ನು ಕೊಲ್ಲಲಾರಂಭಿಸಿತ್ತು.
ಅದೃಷ್ಟವಶಾತ್ ಸರಿಯಾದ ಸಮಯಕ್ಕೆ ಸ್ಥಳಕ್ಕೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದಿದ್ದರಿಂದ ಹಾವು ಸಾಕಿದ್ದ ಆ ವ್ಯಕ್ತಿಯ ಪ್ರಾಣ ಉಳಿದಿದೆ. ಹಾವಿನ ಹಿಡಿತದಿಂದ ಆ ವ್ಯಕ್ತಿಯನ್ನು ಬಚಾವ್ ಮಾಡಲು ಬೇರೆ ಮಾರ್ಗ ಕಾಣದೆ ಪೊಲೀಸರು ಗುಂಡು ಹಾರಿಸಿ ಅದನ್ನು ಕೊಂದಿದ್ದಾರೆ.
ಈ ಭಯಾನಕ ಘಟನೆ ನಡೆದಿರುವುದು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ. 28 ವರ್ಷದ ಯುವಕನೊಬ್ಬ ಹಾವನ್ನು ಸಾಕಿದ್ದ. 15 ಅಡಿ ಉದ್ದದ ಆ ಹಾವು ಅವನ ಕುತ್ತಿಗೆಗೆ ಸುತ್ತು ಹಾಕಿಕೊಂಡು ಉಸಿರುಗಟ್ಟಿಸಿತ್ತು. ಹಾವಿನ ಹಿಡಿತದಿಂದ ತಪ್ಪಿಸಿಕೊಳ್ಳಲಾಗದೆ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲಕ್ಕೆ ಬಿದ್ದಿದ್ದ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗುಂಡು ಹಾರಿಸಿ ಹಾವನ್ನು ಕೊಂದಿದ್ದಾರೆ. ಗುಂಡೇಟು ತಿಂದ ಹಾವು ಮಾಲೀಕನ ಕೊರಳನ್ನು ಬಿಟ್ಟಿದೆ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯ್ತು.
ಆತ ಹತ್ತಾರು ಹಾವುಗಳನ್ನು ಮನೆಯಲ್ಲಿ ಸಾಕಿಕೊಂಡಿದ್ದ. ಅವುಗಳನ್ನು ಪತ್ತೆ ಮಾಡಿದ ಪೊಲೀಸರು, ವಶಕ್ಕೆ ಪಡೆದಿದ್ದಾರೆ. ಮಾಲೀಕನ ಕತ್ತು ಬಿಗಿದಿದ್ದ ಹಾವು ಗುಂಡು ಹಾರಿಸಿದ ತಕ್ಷಣ ಸಾಯಲಿಲ್ಲ. ಆದ್ರೆ ಕುತ್ತಿಗೆಯ ಮೇಲಿದ್ದ ಹಿಡಿತ ಸಡಿಲವಾಯ್ತು. ಈ ಘಟನೆ ನಿಜಕ್ಕೂ ಭಯಾನಕವಾಗಿತ್ತು ಅಂತಾ ಅಲ್ಲಿನ ಪೊಲೀಸರು ವಿವರಿಸಿದ್ದಾರೆ.