ಬೆಂಗಳೂರು: ಶಿಕಾರಿಪುರದಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಬಿ.ವೈ. ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ನಂತರ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ ಅವರು, ವಿಜಯೇಂದ್ರ ಸ್ಪರ್ಧೆ ನಿರ್ಧಾರವನ್ನು ಪಕ್ಷದ ವರಿಷ್ಠರು ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧಿಸುವ ಬಗ್ಗೆ ಯಡಿಯೂರಪ್ಪ ಘೋಷಣೆ ಮಾಡಿರುವುದು ಸಲಹೆ ಅಷ್ಟೇ. ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಪಕ್ಷದ ಸಂಸದೀಯ ಮಂಡಳಿ ತೀರ್ಮಾನಿಸುತ್ತದೆ ಎಂದು ಹೇಳಿದ್ದಾರೆ.
ಈ ಮೂಲಕ ಯಡಿಯೂರಪ್ಪ ಹೇಳಿದ ಕೂಡಲೇ ವಿಜಯೇಂದ್ರ ಸ್ಪರ್ಧೆ ಹಾದಿ ಸುಗಮವಾಗುವುದಿಲ್ಲ. ಪರಾಮರ್ಶೆ ನಡೆಸಿ ಹೈಕಮಾಂಡ್ ಟಿಕೆಟ್ ನೀಡಲಿದೆ ಎನ್ನುವ ಸಂದೇಶವನ್ನು ಸಿ.ಟಿ. ರವಿ ರವಾನಿಸಿದ್ದಾರೆ.
ಇದೇ ವೇಳೆ ಅವರು, ಯಡಿಯೂರಪ್ಪ ಚುನಾವಣೆಗೆ ನಿಲ್ಲುವುದಿಲ್ಲ ಎಂದಷ್ಟೇ ಹೇಳಿದ್ದು, ರಾಜಕಾರಣದಿಂದ ದೂರವಾಗುವುದಾಗಿ ಹೇಳಿಲ್ಲ. ಯಡಿಯೂರಪ್ಪ ಜನಾಕರ್ಷಣೆಯ ನಾಯಕನಾಗಿ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ಬಿಜೆಪಿ ಕಟ್ಟಿ ಬೆಳೆಸಿದ ಅವರಿಗೆ ಪಕ್ಷದ ವ್ಯವಸ್ಥೆಯ ಬಗ್ಗೆ ಗೊತ್ತಿದೆ. ಯಾರಿಗೆ ಟಿಕೆಟ್ ನೀಡುವುದಾದರೂ ಸಂಸದೀಯ ಮಂಡಳಿ ಸಭೆ ನಿರ್ಧರಿಸುತ್ತದೆ ಎಂದು ಸಿ.ಟಿ. ರವಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಶರಣ ವಕೀಲರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, ತಂದೆಯವರ ರಾಜಕೀಯ ನೋಡಿ ಬೆಳೆದವನು ನಾನು. ಕಬಡ್ಡಿ, ಚೆಸ್ ಆಡುವುದನ್ನು ಕಲಿತಿದ್ದೇನೆ ರಾಜಕೀಯದಲ್ಲಿ ಯಾವ ಪಟ್ಟು ಹಾಕಬಹುದು ಎಂಬುದನ್ನು ಕೂಡ ನಾನು ಬಲ್ಲೆ ಎಂದು ಹೇಳಿದ್ದಾರೆ.