ಸುಮಾರು ಒಂದು ಶತಮಾನಕ್ಕೂ ಹೆಚ್ಚು ಇತಿಹಾಸ ಇರುವ ಮುಂಬೈ ಸಮೀಪದ ಮಾಥೆರಾನ್ ಗಿರಿಧಾಮದಲ್ಲಿ ಐಕಾನಿಕ್ ಮಿನಿ ಟಾಯ್ ರೈಲು 2022 ರ ಅಂತ್ಯದ ವೇಳೆಗೆ ತನ್ನ ಸೇವೆಗಳನ್ನು ಪುನರಾರಂಭಿಸುವ ಸಾಧ್ಯತೆಯಿದೆ.
ಧಾರಾಕಾರ ಮಳೆ ಮತ್ತು ಭೂಕುಸಿತದಿಂದ ರೈಲ್ವೆ ಮಾರ್ಗವು ತೀವ್ರವಾಗಿ ಹಾನಿಗೊಳಗಾಗಿದ್ದರಿಂದ 20 ಕಿಮೀ ಉದ್ದದ ನ್ಯಾರೋ ಗೇಜ್ ರೈಲು ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿತು. ರೈಲು ಪ್ರಸ್ತುತ ಎರಡು ನಿಲ್ದಾಣಗಳ ನಡುವೆ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಒಟ್ಟು ಈ ಮಾರ್ಗದಲ್ಲಿ ಐದು ನಿಲ್ದಾಣ ಇವೆ.
ಆ ನ್ಯಾರೋ ಗೇಜ್ ರೈಲಿನ ಹಳಿಗಳಿಗೆ ವ್ಯಾಪಕ ಹಾನಿಯಾದ ನಂತರ ರೈಲು ಸೇವೆ ಸ್ಥಗಿತಗೊಳಿಸಲಾಗಿತ್ತು. ಈ ಪಾರಂಪರಿಕ ರೈಲು ಸೇವೆ ಪುನರಾರಂಭವಾಗಬೇಕೆಂದು 5 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ಸೆಂಟ್ರಲ್ ರೈಲ್ವೇ (ಸಿಆರ್) ಟ್ರ್ಯಾಕ್ ನವೀಕರಣ ಮತ್ತು ಇತರ ಕಾರ್ಯ ಕೈಗೊಂಡಿದ್ದು, ಈ ವರ್ಷದ ಅಂತ್ಯದ ವೇಳೆಗೆ ಕೆಲಸಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೆರಲ್-ಮಾಥೆರಾನ್ ಲೈನ್ ಅನ್ನು 1907 ರಲ್ಲಿ ಪೀರ್‌ಬಾಯ್ಸ್‌ನ ಕುಟುಂಬ ಉದ್ಯಮವಾಗಿ ನಿರ್ಮಿಸಲಾಯಿತು. ಈಗ ಇದು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ (ಯುನೆಸ್ಕೋ) ವಿಶ್ವ ಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದೆ.
ಈ ಆಟಿಕೆ ರೈಲು ರಾಯಗಢ ಜಿಲ್ಲೆಯಲ್ಲಿ ಮಾಥೆರಾನ್ ಗಿರಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ, ವಿಶೇಷವಾಗಿ ಮಕ್ಕಳ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಪ್ರಯಾಣಿಕರನ್ನು ಸಾಗಿಸುವುದರ ಹೊರತಾಗಿ ಸ್ಥಳೀಯರಿಗೆ ಅಗತ್ಯ ವಸ್ತುಗಳನ್ನು ಮತ್ತು ಇತರ ವಸ್ತುಗಳನ್ನು ಸಾಗಿಸಲು ರೈಲು ಸಹಾಯ ಮಾಡುತ್ತದೆ.
ಹಳೆಯ ಹಳಿಗಳನ್ನು ಬದಲಾಯಿಸುವುದು ಸೇರಿ, ಆಳವಾದ ಕಣಿವೆಯ ಮೇಲಿರುವ ಅಪಾಯಕಾರಿ ಸ್ಥಳಗಳಲ್ಲಿ ಹೊಸ ಆಂಟಿ- ಕ್ರಾಶ್ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಮಾನ್ಸೂನ್ ಸಮಯದಲ್ಲಿ ಹಳಿಗಳಿಗೆ ಹಾನಿಯಾಗುವುದನ್ನು ತಪ್ಪಿಸಲು, ಮಾರ್ಗದ ಉದ್ದಕ್ಕೂ ಚರಂಡಿ ನಿರ್ಮಿಸಲಾಗುತ್ತಿದೆ.