ಹುಬ್ಬಳ್ಳಿ: ಪಕ್ಷ ಪೂಜೆಯ ಜೊತೆಗೆ ವ್ಯಕ್ತಿ ಪೂಜೆ ಮಾಡುತ್ತೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸತ್ತ ನಂತರವೇ ನನ್ನ ಬಾಯಿ ಮುಚ್ಚಿಸಲು ಸಾಧ್ಯ ಎಂದು ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಡಿ.ಕೆ. ಶಿವಕುಮಾರ್ ನಮ್ಮ ಪಕ್ಷದ ಅಧ್ಯಕ್ಷರು. ರಾಜಕಾರಣಿಗಳ ಲೆವೆಲ್ ಯಾರೂ ಫಿಕ್ಸ್ ಮಾಡಲು ಆಗುವುದಿಲ್ಲ. ಜಮೀರ್ ಅಹ್ಮದ್ ಖಾನ್ ಲೆವೆಲ್ ಏನೆಂದು ರಾಜ್ಯದ ಜನರನ್ನು ಕೇಳಿದರೆ ಹೇಳುತ್ತಾರೆ ಎಂದರು.
ಒಂದು ಸಮಾಜದ ಮತಗಳಿಂದ ಯಾರೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಮುಸ್ಲಿಂ ಸಮಾಜಕ್ಕಿಂತ ಒಕ್ಕಲಿಗ ಸಮಾಜವನ್ನು ಹೆಚ್ಚಾಗಿ ಪ್ರೀತಿಸುತ್ತೇನೆ. ಒಕ್ಕಲಿಗ ಸಮಾಜದ ಬಗ್ಗೆ ನಾನು ಕೆಟ್ಟದಾಗಿ ಮಾತನಾಡಿಲ್ಲ. ಆರ್. ಅಶೋಕ್, ಸಿ.ಟಿ. ರವಿ, ಕುಮಾರಸ್ವಾಮಿ ಹೇಳಿಕೆಗಳನ್ನು ಗಮನಿಸಿದ್ದೇನೆ. ಸ್ವಾಮೀಜಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ಸಮುದಾಯದ ಮತಗಳಿಂದ ಮುಖ್ಯಮಂತ್ರಿ ಆಗಲು ಆಗುವುದಿಲ್ಲವೆಂದು ಹೇಳಿದ್ದೆ. ನನ್ನ ವೈಯಕ್ತಿಕ ಅಭಿಪ್ರಾಯವನ್ನು ನಾನು ವ್ಯಕ್ತಪಡಿಸಿದ್ದೇನೆ ಎಂದರು.
ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಆಚರಣೆ ನಡೆಯಲಿದೆ. ಸಿದ್ದರಾಮಯ್ಯ ಇದುವರೆಗೆ ಎಂದೂ ಕೂಡ ಬರ್ತಡೇ ಆಚರಿಸಿಕೊಳ್ಳುತ್ತಿರಲಿಲ್ಲ. ನಮ್ಮೆಲ್ಲರ ಒತ್ತಾಯದಿಂದ ಅಮೃತ ಮಹೋತ್ಸವ ಆಚರಣೆಗೆ ಒಪ್ಪಿಕೊಂಡಿದ್ದಾರೆ. ಸುಮಾರು 10 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.