ಕೊಪ್ಪಳ: ಸ್ಕಾರ್ಪಿಯೋ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ.
ಈ ಕುರಿತು ಮಾತನಾಡಿರುವ ಗಣಿ ಹಾಗೂ ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ಸ್ಕಾರ್ಪಿಯೋ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಮೃತಪಟ್ಟಿರುವುದು ದು:ಖದ ಸಂಗತಿ. ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ದೇವಪ್ಪ ಕೊಪ್ಪದ ಎಂಬುವವರ ಮೊಮ್ಮಗಳ ಬರ್ತಡೆ ಪಾರ್ಟಿ ಮುಗಿಸಿ ಸ್ಕಾರ್ಪಿಯೋದಲ್ಲಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಯಲಬುರ್ಗದ ಭಾನಾಪುರ ಬಳಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದರು. ದೇವಪ್ಪ ಕೊಪ್ಪದ (62), ಅವರ ಸೊಸೆ ಗಿರಿಜಮ್ಮ (45), ಅಣ್ಣನ ಮಕ್ಕಳಾದ ಶಾಂತಮ್ಮ(35) , ಪಾರ್ವತಮ್ಮ(32) , ಸಂಬಂಧಿ ಕಸ್ತೂರಮ್ಮ (20) ಮೃತಪಟ್ಟಿದ್ದು, ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.