ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಸಂಜೆ 7 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದು, ರಾಷ್ಟ್ರಪತಿ ಸ್ಥಾನದಿಂದ ನಿರ್ಗಮಿಸಲಿರುವ ಹಿನ್ನೆಲೆಯಲ್ಲಿ ಇದು ಅವರ ವಿದಾಯದ ಭಾಷಣ ಎಂದು ಹೇಳಲಾಗಿದೆ.
ಅವರ ಭಾಷಣ ಆಲ್ ಇಂಡಿಯಾ ರೇಡಿಯೋ, ದೂರದರ್ಶನದ ಹಿಂದಿ ಹಾಗೂ ಇಂಗ್ಲಿಷ್ ಚಾನೆಲ್ ಗಳಲ್ಲಿ ಪ್ರಸಾರವಾಗಲಿದ್ದು, ದೂರದರ್ಶನದ ಪ್ರಾದೇಶಿಕ ಚಾನಲ್ ಗಳು ಸಹ ಸ್ಥಳೀಯ ಭಾಷೆಯಲ್ಲಿ ಭಾಷಣವನ್ನು ಪ್ರಸಾರ ಮಾಡಲಿವೆ.
ರಾಮನಾಥ್ ಕೋವಿಂದ್ ಇಂದು ನಿವೃತ್ತರಾಗಲಿದ್ದು, ದೇಶದ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಸೋಮವಾರದಂದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಎನ್ ಡಿ ಎ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ದ್ರೌಪದಿ ಮುರ್ಮು, ಯುಪಿಎ ಮೈತ್ರಿಕೂಟದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಪರಾಭವಗೊಳಿಸಿದ್ದರು.