ಇತ್ತೀಚೆಗೆ ನಡೆದ NEET ಪರೀಕ್ಷೆ ಸಂದರ್ಭದಲ್ಲಿ ಕೇರಳದ ಪರೀಕ್ಷಾ ಕೇಂದ್ರವೊಂದರ ಸಿಬ್ಬಂದಿ ವಿದ್ಯಾರ್ಥಿನಿಯರ ಬ್ರಾ ಬಿಚ್ಚಿಸಿ ಪರೀಕ್ಷೆ ಬರೆಯಲು ಹೇಳಿದ್ದು ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಬಳಿಕ ತನಿಖೆ ನಡೆದು ಇದಕ್ಕೆ ಕಾರಣರಾದ ಪರೀಕ್ಷಾ ಸಿಬ್ಬಂದಿಗಳನ್ನು ಬಂಧಿಸಲಾಗಿತ್ತು.
ಇದೀಗ ಇಂಥವುದೇ ಅತಿರೇಕದ ವರ್ತನೆಯೊಂದು ರಾಜಸ್ಥಾನದಲ್ಲಿ ಮರುಕಳಿಸಿದೆ. ಶನಿವಾರದಂದು ರಾಜಸ್ಥಾನ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆದಿದ್ದು, ಈ ವೇಳೆ ಪರೀಕ್ಷಾ ಕೇಂದ್ರವೊಂದರಲ್ಲಿ ಮಹಿಳಾ ಅಭ್ಯರ್ಥಿಗಳ ದುಪ್ಪಟ್ಟಾ ತೆಗೆಯಿಸಿ ಪರೀಕ್ಷೆ ಬರೆಸಲಾಗಿದೆ.
ಅಲ್ಲದೆ ಕೆಲವೊಂದು ಕೇಂದ್ರಗಳಲ್ಲಿ ತುಂಬು ತೋಳಿನ ವಸ್ತ್ರ ಧರಿಸಿಕೊಂಡು ಬಂದ ವೇಳೆ ಸ್ಲೀವ್ಸ್ ಕಟ್ ಮಾಡಲಾಗಿದೆ. ಜೊತೆಗೆ ಅಭ್ಯರ್ಥಿಗಳು ಸೀರೆಗೆ ಹಾಕಿದ್ದ ಪಿನ್ ಸಹ ತೆಗೆಸಲಾಗಿದೆ ಎಂದು ತಿಳಿದು ಬಂದಿದೆ. ಮತ್ತೊಂದು ಸಂಗತಿ ಎಂದರೆ ಕೆಲವರು ತಮ್ಮ ಗಾಯಕ್ಕೆ ಬ್ಯಾಂಡೇಜ್ ಹಾಕಿಸಿಕೊಂಡು ಬಂದಿದ್ದಾಗ ಅದನ್ನು ಸಹ ತೆಗೆಸಿ ಹಾಕಲಾಗಿದೆ.
ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ನಕಲು ಮಾಡಬಾರದೆಂಬ ಕಾರಣಕ್ಕೆ ಈ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದರು ಸಹ ಈ ಅತಿರೇಕದ ವರ್ತನೆಯನ್ನು ಸಾರ್ವಜನಿಕರು ಖಂಡಿಸುತ್ತಿದ್ದಾರೆ.