ಹೈದರಾಬಾದ್‌ನ ವೈದ್ಯರೊಬ್ಬರು ಶುಕ್ರವಾರ ಮಹಾರಾಷ್ಟ್ರದ ಶಿರಡಿಯ ಪ್ರಸಿದ್ಧ ಸಾಯಿಬಾಬಾ ದೇವಸ್ಥಾನಕ್ಕೆ 33 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟವನ್ನು ನೀಡಿದ್ದಾರೆ.
707 ಗ್ರಾಂ ತೂಕದ ಕಿರೀಟದಲ್ಲಿ 35 ಗ್ರಾಂ ಅಮೆರಿಕನ್ ವಜ್ರಗಳನ್ನು ಬಳಸಲಾಗಿದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಬನಾಯತ್ ಹೇಳಿದ್ದಾರೆ.
ಈ ಆಭರಣ ನೀಡಿದ ಡಾ. ಮಂದಾ ರಾಮಕೃಷ್ಣ ಅವರು 1992ರಲ್ಲಿ ತಮ್ಮ ಪತ್ನಿಯೊಂದಿಗೆ ಶಿರಡಿಗೆ ಭೇಟಿ ನೀಡಿದ್ದು, ಆ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರೊಬ್ಬರು ತಮಗೆ ಸಾಯಿಬಾಬಾರವರ ಕಿರೀಟವನ್ನು ತೋರಿಸಿ, ಇದೇ ಮಾದರಿಯ ಕಿರೀಟವನ್ನು ನೀಡಬಹುದು ಎಂದಿದ್ದರಂತೆ.
ಅಂದು ಕಿರೀಟಕ್ಕೆ ಬೇಕಾದ ಹಣ ಅವರಲ್ಲಿ ಇಲ್ಲದ ಕಾರಣ ಮುಂದೊಂದು ದಿನ ಸಾಯಿಬಾಬಾರವರಿಗೆ ಚಿನ್ನದ ಕಿರೀಟವನ್ನು ನೀಡುವುದಾಗಿ ಪತ್ನಿಗೆ ಮಾತು ಕೊಟ್ಟಿದ್ದರು. ಆದರೆ ಡಾ.ರಾಮಕೃಷ್ಣ ಅವರ ಪತ್ನಿ ಇತ್ತೀಚೆಗೆ ಮೃತರಾದರು.
ನಿವೃತ್ತಿಯ ನಂತರ 15 ವರ್ಷಗಳ ಕಾಲ ಅಮೆರಿಕದಲ್ಲಿ ನನ್ನ ಅಭ್ಯಾಸವನ್ನು ಮುಂದುವರೆಸಿದೆ. ಅಲ್ಲಿ ಗಳಿಸಿದ ಹಣವನ್ನು ಬಳಸಿಕೊಂಡು ನಾನು ಈಗ ಸಾಯಿಬಾಬಾರವರಿಗೆ ಚಿನ್ನದ ಕಿರೀಟವನ್ನು ಅರ್ಪಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ವಿಶೇಷವೆಂದರೆ ದೇವಸ್ಥಾನದಲ್ಲಿ ಕಿರೀಟವನ್ನು ದಾನ ಮಾಡುವಾಗ ಡಾ. ರಾಮಕೃಷ್ಣ ಅವರು ತಮ್ಮ ಪತ್ನಿಯ ಭಾವಚಿತ್ರವನ್ನು ಹಿಡಿದಿದ್ದರು.