ಬೆಂಗಳೂರು: ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧೆಯ ಕ್ಷೇತ್ರ ಖಚಿತಪಡಿಸುವ ಮೂಲಕ ಪರೋಕ್ಷವಾಗಿ ರಾಜಕೀಯ ನಿವೃತ್ತಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು.
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಸಚಿವ ಆರ್.ಅಶೋಕ್, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ನಿನ್ನೆ ನೀಡಿದ್ದ ಹೇಳಿಕೆಯಿಂದ ಉಂಟಾದ ಗೊಂದಲಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆದು ಕೆಲ ಕಾಲ ಚರ್ಚಿಸಿದರು.
ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಶಿಕಾರಿಪುರದ ಜನತೆ ಪ್ರತಿ ಬಾರಿ ಯಡಿಯೂರಪ್ಪನವರು ಕ್ಷೇತ್ರಕ್ಕೆ ಭೇಟಿ ಕೊಟ್ಟಾಗಲೂ ನೀವೇ ಈ ಬಾರಿಯೂ ಶಾಸಕರಾಗಬೇಕು ಎಂದು ಒತ್ತಾಯಿಸುತ್ತಿದ್ದರು. ಕ್ಷೇತ್ರದ ಜನತೆ ಒತ್ತಾಯ ಹಾಗೂ ಒತ್ತಾಸೆಯಂತೆ ಈ ಬಾರಿ ನಾನು ಚುನಾವಣೆಗೆ ಸ್ಪರ್ಧಿಸಲ್ಲ, ಮಗ ಬಿ.ವೈ.ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಸ್ವತಃ ಯಡಿಯೂರಪ್ಪನವರು ಸ್ಪಷ್ಟಪಡಿಸಿದ್ದು, ಕ್ಷೇತ್ರದ ಜನರ ಒತ್ತಡದಿಂದ ಹಾಗೂ ಅವರ ಒತ್ತಾಸೆಗೆ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಸಲಹೆ ನೀಡಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.
ಯಾವ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡಬೇಕು ಎಂಬುದನ್ನು ಹಾಗೂ ವಿಜಯೇಂದ್ರ ಮಾತ್ರವಲ್ಲ ಇಡೀ ರಾಜ್ಯದ ಜನತೆಯ ಬಗ್ಗೆಯೂ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನಿರ್ಧಾರ ಮಾಡುತಾರೆ. ಹೈಕಮಾಂಡ್ ನಿರ್ಧಾರದಂತೆ ಟಿಕೆಟ್ ನೀಡಲಾಗುತ್ತದೆ. ಈಗ ಎದ್ದಿರುವ ಎಲ್ಲಾ ಗೊಂದಲಗಳಿಗೂ ಮಾಧ್ಯಮಗಳು ತೆರೆ ಎಳೆಯಬೇಕು ಎಂದು ಹೇಳಿದರು.
ಇನ್ನು ರಾಜಾಹುಲಿಯ ರಾಜಕೀಯ ನಿವೃತ್ತಿ ಮಾತುಗಳ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ, ಯಡಿಯೂರಪ್ಪ ಎಂದರೆ ಒಂದು ಶಕ್ತಿ. ಬಿಜೆಪಿಗೆ ಮಾತ್ರವಲ್ಲ, ಇಡೀ ರಾಜ್ಯ ಹಾಗೂ ದೇಶಕ್ಕೆ ಸ್ಫೂರ್ತಿ. ಅವರ ನಿವೃತ್ತಿ ಬಗ್ಗೆ ಮಾತೇ ಇಲ್ಲ. ನಾಳೆಯಿಂದಲೇ ಪಕ್ಷದ ಕಾರ್ಯಕ್ರಮಗಳನ್ನು ಸಿದ್ಧ ಮಾಡಿ, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಹೇಳಿದ್ದಾರೆ. ಜುಲೈ 28ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂದೇ ಚುನಾವಣಾ ಕಾರ್ಯಕ್ರಮದ ಮುಂದಿನ ರೂಪುರೇಷೇ ಬಗ್ಗೆ ಘೋಷಿಸಲಾಗುವುದು ಎಂದರು.
ವಿಜಯೇಂದ್ರ ಕ್ಷೇತ್ರ ಖಚಿತಪಡಿಸುವ ಮೂಲಕ ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ನಾಯಕರನ್ನು ಬಿ ಎಸ್ ವೈ ಇಕ್ಕಟ್ಟಿಗೆ ಸಿಲುಕಿಸಿದರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಅವರು ಸಿಎಂ ಹುದ್ದೆ ತ್ಯಾಗ ಮಾಡಿದಾಗಲೇ ಯಾರನ್ನೂ ಇಕ್ಕಟ್ಟಿಗೆ ಸಿಲುಕಿಸಿದವರಲ್ಲ. ಸ್ಪಷ್ಟವಾಗಿ ನಿಲುವು ಹೊಂದಿದ ಮಹಾನುಭಾವರು. ಅವರಿಂದ ಯಾವ ಸಂದರ್ಭದಲ್ಲೂ ಇಕ್ಕಟ್ಟು ಆಗಿಲ್ಲ. ಯಾವ ಗೊಂದಲಕ್ಕೂ ಆಸ್ಪದ ಬೇಡ. ಶಿಕಾರಿಪುರದ ಮಾಹಾಜನತೆಯ ಪ್ರೀತಿಗೆ ವಿಜಯೇಂದ್ರ ಹೆಸರನ್ನು ಸಲಹೆ ನೀಡಿದ್ದಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.