ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ನಂತರ ಆಕೆಯನ್ನು ಮದುವೆ ಮಾಡಿಕೊಂಡಾಕ್ಷಣ ಆರೋಪಿ ಮಾಡಿರುವ ಕೃತ್ಯವೇನೂ ಕಡಿಮೆಯಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಪೋಕ್ಸೊ ಕಾಯಿದೆಯಡಿ ಪ್ರಕರಣವೊಂದರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ಥೆಯನ್ನು ಆರೋಪಿಗೇ ಗಂಟು ಹಾಕುವ ಮೂಲಕ ಕಾನೂನಿನ ಉಲ್ಲಂಘನೆ ಮಾಡಿದಾಗ ಅದರಿಂದ ಮಗುವಿನ ಜನನಕ್ಕೆ ಕಾರಣವಾಗಬಹುದೇ ಹೊರತು ಆತ ಮಾಡಿದ ಅಪರಾಧವನ್ನು ಇದರಿಂದ ಸಮರ್ಥಿಸಿಕೊಳ್ಳಲಾಗದು ಎಂದು ನ್ಯಾಯಾಲಯ ಹೇಳಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ನಂತರ ಅವಳನ್ನು ಮದುವೆಯಾಗಿದ್ದ 27 ವರ್ಷದ ವ್ಯಕ್ತಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. 2019ರ ಜುಲೈ 19ರಿಂದ 15 ವರ್ಷದ ತಮ್ಮ ಮಗಳು ಕಾಣೆಯಾಗಿರುವುದಾಗಿ ಬಾಲಕಿಯ ತಾಯಿ ದೂರು ನೀಡಿದ್ದರು. ಪ್ರಕರಣವನ್ನು ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿತ್ತು.
ತನಿಖೆ ವೇಳೆ ಆರೋಪಿ ಬಾಲಕಿ ಎಲ್ಲಿದ್ದಾಳೆ ಎಂಬ ಬಗ್ಗೆ ತಪ್ಪು ಮಾಹಿತಿ ನೀಡಿ ಪೊಲೀಸರನ್ನೇ ಯಾಮಾರಿಸಲು ಯತ್ನಿಸಿದ್ದ. ಕೊನೆಗೂ 2021ರ ಅಕ್ಟೋಬರ್ 5ರಂದು ಆರೋಪಿಯ ಮನೆಯಲ್ಲೇ ಬಾಲಕಿ ಪತ್ತೆಯಾಗಿದ್ದಳು. ಅಷ್ಟರಲ್ಲಾಗ್ಲೇ ಆಕೆಗೆ 8 ತಿಂಗಳ ಹೆಣ್ಣು ಮಗುವಿತ್ತು. ಅಷ್ಟೇ ಅಲ್ಲ ಎರಡನೇ ಬಾರಿ ಆಕೆ ಗರ್ಭಿಣಿಯಾಗಿದ್ದಳು.
ಬಾಲಕಿಗೆ ಆಮಿಷವೊಡ್ಡಿ ಕರೆತಂದಿದ್ದ ಕಾಮುಕ ಆಕೆಯನ್ನು ದೆಹಲಿಯ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದ. 2021ರ ಅಕ್ಟೋಬರ್ 6ರಿಂದ ಆತ ಪೊಲೀಸ್ ಕಸ್ಟಡಿಯಲ್ಲೇ ಇದ್ದ. ಮಗು ಮತ್ತು ಹೆಂಡತಿಯ ಜವಾಬ್ಧಾರಿ ತನ್ನ ಮೇಲಿದೆ ಹಾಗಾಗಿ ಜಾಮೀನು ಕೊಡಿ ಎಂದು ಅರ್ಜಿ ಸಲ್ಲಿಸಿದ್ದ. ಅಪಹರಣಕ್ಕೊಳಗಾದಾಗ ಬಾಲಕಿ 9ನೇ ತರಗತಿಯಲ್ಲಿ ಓದುತ್ತಿದ್ಲು. ಆಕೆಗೆ ಆಗ ಕೇವಲ 14 ವರ್ಷ 6 ತಿಂಗಳು.
18 ವರ್ಷಕ್ಕಿಂತ ಮೊದಲೇ ವಿವಾಹವಾಗಿದ್ದರಿಂದ ಬಾಲಕಿ ಎಷ್ಟೆಲ್ಲಾ ತೊಂದರೆ ಅನುಭವಿಸಬೇಕಾಯ್ತು ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಹಾಗಾಗಿ ಮದುವೆ ಆತ ಮಾಡಿರೋ ಕೃತ್ಯಕ್ಕೆ ಸಮರ್ಥನೆಯಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಜಾಮೀನು ಅರ್ಜಿಯನ್ನು ವಜಾ ಮಾಡಿದೆ.