ಬೆಂಗಳೂರು: ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರವನ್ನು ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಬಿಟ್ಟುಕೊಟ್ಟ ವಿಚಾರಕ್ಕೆ ಕಾಂಗ್ರೆಸ್ ಘಟಕದಿಂದ ಟ್ವೀಟ್ ಮಾಡಿ ಕುಟುಂಬ ರಾಜಕಾರಣ ಎಂದು ಟೀಕಿಸಲಾಗಿದೆ.
ವರುಣ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆಯನ್ನು ತಡೆಯಲಾಗಿತ್ತು. ಮಸ್ಕಿ, ಹಾನಗಲ್ ಕ್ಷೇತ್ರದಲ್ಲಿ ಸ್ಪರ್ಧೆಯ ಕನಸಿಗೆ ಬಿಜೆಪಿ ತಣ್ಣೀರು ಸುರಿದಿತ್ತು. ವಿಧಾನ ಪರಿಷತ್ ಸ್ಪರ್ಧೆಗೆ ಬ್ರೇಕ್ ಹಾಕಿತ್ತು. ಮಂತ್ರಿಗಿರಿ ವಂಚಿಸಲಾಯ್ತು. ಯಡಿಯೂರಪ್ಪ ಮುಕ್ತ ಬಿಜೆಪಿ ಕಸರತ್ತುಗಳಿಗೆ ಮಣಿದು ಯಡಿಯೂರಪ್ಪ ಅವರೇ ಪುತ್ರನಿಗೆ ಕ್ಷೇತ್ರ ಬಿಡುವಂತಾಯ್ತು ಎಂದು ಹೇಳಲಾಗಿದೆ.
ಕಾಂಗ್ರೆಸ್ ನತ್ತ ಕುಟುಂಬ ರಾಜಕಾರಣದ ಗೂಬೆ ಕೂರಿಸುವ ಬಿಜೆಪಿಗೆ ಶಿಕಾರಿಪುರದಲ್ಲಿ ಸ್ಪರ್ಧಿಸಲು ಸಾಮಾನ್ಯ ಕಾರ್ಯಕರ್ತರು ಸಿಗಲಿಲ್ಲವೇ? ವಿಜಯೇಂದ್ರ ಸ್ಪರ್ಧೆ ಬಿಜೆಪಿ ಕುಟುಂಬ ರಾಜಕಾರಣಕ್ಕೆ ಹೊಸ ಸೇರ್ಪಡೆ. ದೇಶದುದ್ದಕ್ಕೂ ಕುಟುಂಬ ರಾಜಕಾರಣದ ಬೀಜ ಬಿತ್ತಿದ ಬಿಜೆಪಿ ಬೇರೆ ಪಕ್ಷಗಳತ್ತ ಬೆರಳು ತೋರಿಸುವುದು ಪರಮ ಹಾಸ್ಯವಾಗಿದೆ. ಅಂತೂ ಇಂತೂ ‘ಸಂತೋಷಕೂಟ’ದ ಬಿ.ಎಸ್.ವೈ. ಮುಕ್ತ ಬಿಜೆಪಿ ಅಭಿಯಾನ ಕೊನೆಯ ಹಂತಕ್ಕೆ ಬಂದಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕದಿಂದ ಟ್ವೀಟ್ ಮಾಡಲಾಗಿದೆ.