alex Certify BIG NEWS: ಲೈಂಗಿಕ ಸಂಪರ್ಕದಿಂದ್ಲೇ ಹೆಚ್ಚಾಗಿ ಹರಡುತ್ತಿದೆ ಮಂಕಿಪಾಕ್ಸ್‌ ಸೋಂಕು, ಸಂಶೋಧನೆಯಲ್ಲಿ ಮತ್ತಷ್ಟು ಆಘಾತಕಾರಿ ಮಾಹಿತಿ ಬಹಿರಂಗ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲೈಂಗಿಕ ಸಂಪರ್ಕದಿಂದ್ಲೇ ಹೆಚ್ಚಾಗಿ ಹರಡುತ್ತಿದೆ ಮಂಕಿಪಾಕ್ಸ್‌ ಸೋಂಕು, ಸಂಶೋಧನೆಯಲ್ಲಿ ಮತ್ತಷ್ಟು ಆಘಾತಕಾರಿ ಮಾಹಿತಿ ಬಹಿರಂಗ…!

ಕೊರೊನಾ ಬಳಿಕ ಮಂಕಿ ಪಾಕ್ಸ್‌ ಎಂಬ ಮಾರಕ ರೋಗ ಇಡೀ ಜಗತ್ತನ್ನೇ ನಡುಗಿಸ್ತಾ ಇದೆ. ಮಂಕಿಪಾಕ್ಸ್‌ನ ಸ್ವರೂಪಗಳನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಸಾಕಷ್ಟು ಸಂಶೋಧನೆಗಳನ್ನು ನಡೆಸ್ತಿದ್ದಾರೆ. 16 ದೇಶಗಳ ಜಾಗತಿಕ ಕೇಸ್ ಸ್ಟಡಿ ಪ್ರಕಾರ ಶೇ.95ರಷ್ಟು ಮಂಕಿಪಾಕ್ಸ್ ಪ್ರಕರಣಗಳಲ್ಲಿ ಲೈಂಗಿಕ ಸಾಮೀಪ್ಯದಿಂದಲೇ ಸೋಂಕು ಹರಡಿರುವುದು ದೃಢಪಟ್ಟಿದೆ.

ನಿಕಟ ದೈಹಿಕ ಸಂಪರ್ಕ, ಜೋರಾಗಿ ಉಸಿರಾಡಿದಾಗ ಸಿಡಿಯುವ ಎಂಜಲ ಹನಿಗಳು, ಬಟ್ಟೆ ಮತ್ತು ಇತರ ಮೇಲ್ಮೈಗಳ ಮೂಲಕವೂ ವೈರಸ್ ಹರಡಬಹುದು ಎಂದು ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. ವಿಜ್ಞಾನಿಗಳ ತಂಡ ಏಪ್ರಿಲ್ 27 ರಿಂದ ಜೂನ್ 24ರ ನಡುವೆ 16 ದೇಶಗಳಲ್ಲಿ 528 ಮಂಕಿಪಾಕ್ಸ್‌ ಪ್ರಕರಣವನ್ನು ಪತ್ತೆ ಹಚ್ಚಿದೆ. ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಸಂಶೋಧನೆಗಳ ಪ್ರಕಾರ 95 ಪ್ರತಿಶತದಷ್ಟು ಸೋಂಕಿತರು ಕೇವಲ ರಾಶಸ್‌ ಹೊಂದಿದ್ದಾರೆ.

73 ಪ್ರತಿಶತದಷ್ಟು ಸೋಂಕಿತರು ಅನೋಜೆನಿಟಲ್ ಗಾಯಗಳನ್ನು ಹೊಂದಿದ್ದಾರೆ ಮತ್ತು 41 ಪ್ರತಿಶತದಷ್ಟು ಜನರು ಲೋಳೆಪೊರೆಯ ಗಾಯಗಳಿಗೆ ತುತ್ತಾಗಿದ್ದಾರೆ.  ಒಟ್ಟಾರೆಯಾಗಿ ಸೋಂಕಿಗೆ ಒಳಗಾದ ಶೇ.98ರಷ್ಟು ಮಂದಿ ಸಲಿಂಗಕಾಮಿ ಅಥವಾ ದ್ವಿಲಿಂಗಿ ಪುರುಷರಾಗಿದ್ದಾರೆ. 75 ಪ್ರತಿಶತ ಬಿಳಿಯರು ಮತ್ತು 41 ಪ್ರತಿಶತದಷ್ಟು ಜನರು ಮಾನವ ಇಮ್ಯುನೊ ಡಿಫಿಷಿಯನ್ಸಿ ವೈರಸ್ ಸೋಂಕನ್ನು ಹೊಂದಿದ್ದಾರೆ. ಜ್ವರ, ಆಲಸ್ಯ, ಮೈಯಾಲ್ಜಿಯಾ, ತಲೆನೋವು, ದದ್ದುಗಳು ಇವೆಲ್ಲ ಮಂಕಿಪಾಕ್ಸ್‌ನ ಸಾಮಾನ್ಯ ಲಕ್ಷಣಗಳು.

ಲಿಂಫಾಡೆನೋಪತಿ – ದುಗ್ಧರಸ ಗ್ರಂಥಿಗಳ ಊತ – ಸಹ ಸಾಮಾನ್ಯವಾಗಿದೆ. ಪರೀಕ್ಷೆಗೆ ಒಳಗಾದ 377 ವ್ಯಕ್ತಿಗಳಲ್ಲಿ 109 ಮಂದಿಗೆ ಲೈಂಗಿಕವಾಗಿ ಸೋಂಕು ಹರಡಿದೆ. ಸೋಂಕು ತಗುಲಿ ವಾರದ ಬಳಿಕ ಪರಿಣಾಮ ಗೋಚರಿಸಿದೆ. ಏಕ ಜನನಾಂಗದ ಗಾಯಗಳು, ಬಾಯಿ ಅಥವಾ ಗುದದ ಮೇಲೆ ಹುಣ್ಣುಗಳು ಸಹ ಕಾಣಿಸಿಕೊಳ್ಳುತ್ತವೆ. ಕ್ಲಿನಿಕಲ್ ರೋಗ ಲಕ್ಷಣಗಳು ಸಿಫಿಲಿಸ್ ಅಥವಾ ಹರ್ಪಿಸ್‌ನಂತಹ ಲೈಂಗಿಕವಾಗಿ ಹರಡುವ ಸೋಂಕುಗಳನ್ನು ಹೋಲುತ್ತವೆ. ಹಾಗಾಗಿ ತಪ್ಪಾದ ರೋಗ ನಿರ್ಣಯಕ್ಕೆ ಇದು ಕಾರಣವಾಗಬಹುದು.

ಕೆಲವು ಜನರಲ್ಲಿ, ಗುದ ಮತ್ತು ಮೌಖಿಕ ರೋಗಲಕ್ಷಣಗಳು, ನೋವು, ನುಂಗಲು ತೊಂದರೆ ಈ ಸಮಸ್ಯೆಗಳು ಸಹ ಕಾಣಿಸಿಕೊಂಡಿವೆ. ತಪ್ಪಾದ ರೋಗ ನಿರ್ಣಯವು ಕಾಯಿಲೆ ಪತ್ತೆ ಹಚ್ಚುವಿಕೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತದೆ. ಮಂಕಿಪಾಕ್ಸ್ ಇರುವವರಿಂದ ಪರೀಕ್ಷಿಸಲಾದ ವೀರ್ಯ ಮಾದರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಂಕಿಪಾಕ್ಸ್ ವೈರಸ್ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಆದಾಗ್ಯೂ, ಇದು ಪ್ರಾಸಂಗಿಕವಾಗಿರಬಹುದು ಎನ್ನುತ್ತಾರೆ ಸಂಶೋಧಕರು. ಹಾಗಾಗಿ ಇನ್ನಷ್ಟು ಸಂಶೋಧನೆಗಳ ಬಳಿಕವಷ್ಟೇ ಮಂಕಿಪಾಕ್ಸ್‌ನ ನಿರ್ದಿಷ್ಟ ಲಕ್ಷಣಗಳು ಹಾಗೂ ಚಿಕಿತ್ಸೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...