ನೀತಿ ಆಯೋಗ ಮಹತ್ವದ ಎರಡು ಯೋಜನೆಗಳಿಗೆ ಚಾಲನೆ ನೀಡಿದೆ. ವಿದ್ಯುತ್ ಚಲನಶೀಲತೆಯ ಕುರಿತು ಜಾಗೃತಿ ಮೂಡಿಸಲು ಇ-ಅಮೃತ್ (ಭಾರತದ ಸಾರಿಗೆಗಾಗಿ ವೇಗವರ್ಧಿತ ಇ-ಮೊಬಿಲಿಟಿ ಕ್ರಾಂತಿ) ಮೊಬೈಲ್ ಅಪ್ಲಿಕೇಶನ್ ಅನ್ನು ಆರಂಭಿಸಿದೆ. ಈ ನಿಟ್ಟಿನಲ್ಲಿ ಬ್ರಿಟನ್ ಗ್ಲಾಸ್ಗೋದಲ್ಲಿ ನಡೆದ ಹವಾಮಾನ ಶೃಂಗಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನಗಳಿಗೆ ಉಳಿದ 41 ರಾಷ್ಟ್ರಗಳೊಟ್ಟಿಗೆ ಭಾರತ ಕೂಡ ಸಹಿ ಹಾಕಿತ್ತು.
ರಸ್ತೆ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಸಂಬಂಧಪಟ್ಟಂತೆ ಬ್ರಿಟನ್ ಹಾಗೂ ಅಮೆರಿಕ ತೆಗೆದುಕೊಂಡಿರೋ ಉಪಕ್ರಮಗಳಿಗೆ ಭಾರತ ಸಹ ಸಾಥ್ ಕೊಟ್ಟಿದೆ. 2030ರ ವೇಳೆಗೆ ದ್ವಿಚಕ್ರ, ತ್ರಿಚಕ್ರ ವಾಹನಗಳು, ಕಾರು, ವ್ಯಾನ್‌ಗಳು, ಹೆವಿ ಡ್ಯೂಟಿ ವೆಹಿಕಲ್‌ಗಳನ್ನು ಒಳಗೊಂಡಂತೆ ಎಲಲಾ ವಾಹನಗಳು ಜನಸಾಮಾನ್ಯರ ಕೈಗೆಟುಕುವಂತೆ ಮಾಡುವುದರ ಜೊತೆಗೆ ಶೂನ್ಯ ಹೊರಸೂಸುವಿಕೆ ವಾಹನಗಳನ್ನು ಉತ್ಪಾದಿಸುವುದು ಭಾರತದ ಗುರಿಯಾಗಿದೆ.
ಭಾರತ ವಿಶ್ವದಲ್ಲಿ ಐದನೇ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ವಾಹನ ಮಾರುಕಟ್ಟೆಯಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಬೃಹತ್ ಅವಕಾಶವನ್ನು ಭಾರತದಲ್ಲೂ ಒದಗಿಸಲಾಗುತ್ತದೆ. ಇದಕ್ಕಾಗಿಯೇ ದೇಶ ಝೀರೋ ಎಮಿಶನ್ ವೆಹಿಕಲ್‌ಗಳತ್ತ ಚಿತ್ತ ನೆಟ್ಟಿದೆ. ಹೊಸದಾಗಿ 100,000 ಇ-ಮೊಬಿಲಿಟಿ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದೆ. ತಂತ್ರಜ್ಞಾನ ವೆಚ್ಚಗಳ ಕಡಿತ, ಶುದ್ಧ ಗಾಳಿ, ಇಂಧನಗಳ ಆಮದು ಮೇಲಿನ ಅವಲಂಬನೆಯನ್ನೂ ಕಡಿಮೆ ಮಾಡಲು ನೀತಿ ಆಯೋಗ ಯೋಜನೆಗಳನ್ನು ಹಮ್ಮಿಕೊಂಡಿದೆ.
ಪರಿಸರ ವ್ಯವಸ್ಥೆಯ ಕ್ಷಿಪ್ರ ಅಭಿವೃದ್ಧಿ, ಉದ್ಯಮದಿಂದ ಹೆಚ್ಚಿದ ಭಾಗವಹಿಸುವಿಕೆ, ಅಂತರಾಷ್ಟ್ರೀಯ ಸಹಯೋಗ ಮತ್ತು ಸರ್ಕಾರದ ನೀತಿಗಳು ಇವೆಲ್ಲವೂ ಮುಂದಿನ ದಶಕದಲ್ಲಿ ಭಾರತದ ಅಭಿವೃದ್ಧಿಗೆ ಪೂರಕವಾಗಿದ್ದು, ಎಲೆಕ್ಟ್ರಿಕ್ ವೆಹಿಕಲ್‌ಗಳ ಅಳವಡಿಕೆಯನ್ನು ಉತ್ತೇಜಿಸುತ್ತದೆ ಎಂದು ನೀತಿ ಆಯೋಗದ ಸಿಇಓ ಪರಮೇಶ್ವರನ್ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ. ಸಾರಿಗೆ ವ್ಯವಸ್ಥೆಯ ವಿದ್ಯುದೀಕರಣವು ಭಾರತದ ಪರಿವರ್ತನಾ ಚಲನಶೀಲತೆಗೆ ಮಾದರಿಯಾಗಿದೆ. ಪ್ರಕೃತಿಗೆ ಪೂರಕವಾದ ಪರಿವರ್ತನೆಯನ್ನು ವೇಗಗೊಳಿಸಲು ಭಾರತ ಮತ್ತಷ್ಟು ಮೂಲಸೌಕರ್ಯವನ್ನು ನಿರ್ಮಿಸಬೇಕಿದೆ.
ಇದಕ್ಕಾಗಿ ಸಾರ್ವಜನಿಕ ಮತ್ತು ಖಾಸಗಿ ಬಂಡವಾಳದ ಹರಿವಿನ ಅಗತ್ಯವಿದೆ ಅನ್ನೋದು ನೀತಿ ಆಯೋಗದ ಉಪಾಧ್ಯಕ್ಷರ ಅಭಿಪ್ರಾಯ. ಇ-ಅಮೃತ್ ಅಪ್ಲಿಕೇಶನ್ ಬಳಕೆದಾರರಿಗೆ ಎಲೆಕ್ಟ್ರಿಕ್ ವಾಹನಗಳ ಪ್ರಯೋಜನಗಳನ್ನು ನಿರ್ಣಯಿಸಲು, ಉಳಿತಾಯವನ್ನು ನಿರ್ಧರಿಸಲು ಮತ್ತು ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಮತ್ತು ಉದ್ಯಮದಲ್ಲಿನ ಬೆಳವಣಿಗೆಗಳ ಕುರಿತು ಎಲ್ಲಾ ಮಾಹಿತಿಯನ್ನು ಅವರ ಬೆರಳ ತುದಿಯಲ್ಲಿ ಪಡೆಯಲು ಅನುವು ಮಾಡಿಕೊಡುತ್ತದೆ. ಇಂದು ಆಂಡ್ರಾಯ್ಡ್ ಆವೃತ್ತಿಯಲ್ಲಿ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ.