ಕಳೆದ ಎರಡೂವರೆ ವರ್ಷಗಳಲ್ಲಿ ಬ್ರೀತ್ ಅನಲೈಸರ್ (ಬಿಎ) ಪರೀಕ್ಷೆಯ ನಂತರ ಒಟ್ಟು 60 ಪೈಲಟ್ಗಳು ಮತ್ತು 150 ಕ್ಯಾಬಿನ್ ಸಿಬ್ಬಂದಿ ಕರ್ತವ್ಯ ನಿರ್ವಹಣೆಗೆ ಅವಕಾಶ ಪಡೆದುಕೊಂಡಿಲ್ಲ.
ಪೈಲೆಟ್ಗಳು ಮತ್ತು ಕ್ಯಾಬಿನ್ ಸಿಬ್ಬಂದಿಯ ಆಲ್ಕೋಹಾಲ್ ಸೇವನೆಯಿಂದ ವಾಯುಯಾನ ಸುರಕ್ಷತೆಗೆ ಧಕ್ಕೆಯಾಗಬಾರದೆಂಬುದನ್ನು ಖಚಿತಪಡಿಸಿಕೊಳ್ಳಲು ಬ್ರೀತ್ ಅನಲೈಸರ್ ಪರೀಕ್ಷೆ ನಡೆಸಲಾಗುತ್ತದೆ.
ಜನವರಿ 1, 2020 ರಿಂದ ಜೂನ್ 30, 2022 ರ ಅವಧಿಯಲ್ಲಿ ನಿಬಂಧನೆಗಳ ಪ್ರಕಾರ ಯಾವುದೇ ಪರವಾನಗಿಯನ್ನು ರದ್ದುಗೊಳಿಸಲಾಗಿಲ್ಲ. ಆದರೂ 210 ಪೈಲಟ್ ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಡಿಜಿಸಿಎ ತನ್ನ ಮಾರ್ಗಸೂಚಿಗಳಲ್ಲಿ ವಿಮಾನಯಾನ ಸಂಸ್ಥೆಗಳು ತಮ್ಮ ಕಾಕ್ಪಿಟ್ ಮತ್ತು ಕ್ಯಾಬಿನ್-ಸಿಬ್ಬಂದಿಯ ಶೇಕಡಾ 50 ರಷ್ಟು ಸದಸ್ಯರು ಪ್ರತಿದಿನವೂ ಆಲ್ಕೋಹಾಲ್ ಪರೀಕ್ಷೆಗೆ ಒಳಪಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಈ ಹಿಂದೆ ಹೇಳಿತ್ತು.
ಡಿಜಿಸಿಎ ಸಲಹೆಯ ಪ್ರಕಾರ, ಮದ್ಯಪಾನ ಸೇವಿಸಿದ 12 ಗಂಟೆಗಳ ನಂತರವೂ ರಕ್ತದ ಆಲ್ಕೋಹಾಲ್ ಮಟ್ಟವು ಶೂನ್ಯವಾಗಿದ್ದಾಗ ಕಾರ್ಯಕ್ಷಮತೆಯಲ್ಲಿ ಇಳಿಕೆ ಕಂಡುಬರಬಹುದು. ಇದು ವಿಮಾನದ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಮತ್ತು ಹ್ಯಾಂಗೊವರ್ ಅವಧಿಯವರೆಗೂ ಏವಿಯೇಟರ್ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದೆ.