ಮೈಸೂರು: ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಾಂಗ್ರೆಸ್ ಗೆ ಜಾತಿ ಕೆಸರು ಅಂಟಿಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಒಬ್ಬ ಒಳ್ಳೆಯ ನಾಯಕ ಎಂದುಕೊಂಡಿದ್ದೆ. ಆದರೆ, ಅವರು ಜಾತಿವಾದಿಯಾಗಿದ್ದಾರೆ. ಮುಖ್ಯಮಂತ್ರಿ ಆಗಲು ತಮ್ಮ ಸಮಾಜ ತನ್ನ ಬೆನ್ನಿಗೆ ಬರಬೇಕು. ಬೆಂಬಲಕ್ಕೆ ಬರಬೇಕೆಂದು ಹೇಳಿದ್ದಾರೆ. ಸಿದ್ದರಾಮಯ್ಯ ಕುರುಬರ ನಾಯಕ ಎಂದು ಹೇಳುವ ಮೂಲಕ ಅವರು ಕೂಡ ಜಾತಿವಾದಿಯಾಗಿದ್ದಾರೆ. ಇವರಿಬ್ಬರೂ ಸೇರಿ ಕಾಂಗ್ರೆಸ್ ಗೆ ಜಾತಿಯ ಕೆಸರು ಅಂಟಿಸಿದ್ದಾರೆ. ಈ ವಿಚಾರದಲ್ಲಿ ನಾನು ಮಲ್ಲಿಕಾರ್ಜುನ ಖರ್ಗೆ ಮತ್ತು ಹರಿಪ್ರಸಾದ್ ನೀಡಿದ ಹೇಳಿಕೆಗೆ ನಾನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
ನಾಲ್ಕು ತಲೆಮಾರಿಗೆ ಆಗುವಷ್ಟು ಹಣ ಸಂಪಾದಿಸಿದ್ದೇವೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೀಡಿದ ಹೇಳಿಕೆಗೆ ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ರಮೇಶ್ ಕುಮಾರ್ ಅವರ ಹೇಳಿಕೆಯಿಂದ ಕಾಂಗ್ರೆಸ್ ಭ್ರಷ್ಟತನ ಬಯಲಾಗಿದೆ. ರಮೇಶ್ ಕುಮಾರ್ ಸತ್ಯವನ್ನೇ ಹೇಳಿದ್ದಾರೆ. ಇಂತಹ ಕಾಂಗ್ರೆಸ್ ನಮ್ಮ ಮೇಲೆ ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಈಶ್ವರಪ್ಪ, ನಾನು ಪ್ರಕರಣದಲ್ಲಿ ಯಾವುದೇ ರೀತಿಯ ತಪ್ಪು ಮಾಡಿಲ್ಲ. ಪಕ್ಷಕ್ಕೆ ಮುಜುಗರ ಆಗಬಾರದೆಂದು ರಾಜೀನಾಮೆ ನೀಡಿದ್ದೆ. ಇದೀಗ ನಾನು ಸಂಪೂರ್ಣ ಆರೋಪ ಮುಕ್ತನಾಗಿದ್ದೇನೆ. ಪ್ರಕರಣದಿಂದ ಪಕ್ಷಕ್ಕೆ ಆಗಿದ್ದ ಮುಜುಗರ ನಿವಾರಣೆಯಾಗಿದೆ. ಕ್ಲೀನ್ ಶೀಟ್ ನೀಡಿದ್ರೂ ಕಾಂಗ್ರೆಸ್ ನವರು ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ನವರ ಟೀಕೆಯಿಂದ ನನಗೆ ಬೇಸರ ತರಿಸಿದೆ ಎಂದು ಹೇಳಿದ್ದಾರೆ.