ಶಿವಮೊಗ್ಗ: ಆಹಾರ ಭದ್ರತೆಯೊಂದಿಗೆ ಪೋಷಣೆಯ ಭದ್ರತೆಯನ್ನೂ ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆದುಕೊಂಡಿದ್ದು ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಮಾಡಲು ಕ್ರಮ ಕೈಗೊಂಡಿದೆ ಎಂದು ಭಾರತ ಆಹಾರ ನಿಗಮದ ಶಿವಮೊಗ್ಗ ಡಿವಿಷನಲ್ ಮ್ಯಾನೇಜರ್ ಭಗವಾನ್ ಸಿಂಗ್ ತಿಳಿಸಿದರು.
ಇಂದು ಗಾಡಿಕೊಪ್ಪದ ಭಾರತ ಆಹಾರ ನಿಗಮ(ಎಫ್‍ಸಿಐ)ದ ವಿಭಾಗೀಯ ಕಚೇರಿಯಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತಾಡಿದರು.
ಕೋವಿಡ್ ಸಮಯದಲ್ಲಿ ಯಾರೊಬ್ಬರೂ ಆಹಾರದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಪಿಎಂಜಿಕೆವೈ ಯೋಜನೆ ಜಾರಿಗೊಳಿಸಿ ದುರ್ಬಲ ವರ್ಗದವರಿಗೆ ಉಚಿತ ಪಡಿತರ ವಿತರಿಸುತ್ತಿದೆ. ದೇಶದಲ್ಲಿ ಬಹುತೇಕರಲ್ಲಿ ಪೋಷಕಾಂಶದ ಕೊರತೆ ಇರುವುದನ್ನು ಸರ್ಕಾರ ಮನಗಂಡು ಸಾರವರ್ಧಿತ ಅಕ್ಕಿಯನ್ನು ಪಡಿತರ ವ್ಯವಸ್ಥೆ ಮತ್ತು ಮಧ್ಯಾಹ್ನದ ಬಿಸಿಯೂಟದಲ್ಲಿ ನೀಡಲು ಮುಂದಾಗಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗಲಿದೆ. ಪ್ರಸ್ತುತ ಅತಿ ಹೆಚ್ಚು ಪೋಷಕಾಂಶ ಕೊರತೆ ಇರುವ ಅಧಿಸೂಚಿತ ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿ ಪೂರೈಕೆಯಾಗುತ್ತಿದ್ದು, 2024 ರ ಹೊತ್ತಿಗೆ ದೇಶಾದ್ಯಂತ ಪೂರೈಕೆಯಾಗಲಿದೆ ಎಂದರು.