ಸುದೀರ್ಘ ಕೆಲಸದ ಅವಧಿಯ ಒತ್ತಡವನ್ನು ನಿವಾರಿಸಲು ಜಪಾನಿನ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ನ್ಯಾಪ್ ಬಾಕ್ಸ್‌ಗಳ ಪರಿಕಲ್ಪನೆಯನ್ನು ಪರಿಚಯಿಸಿದೆ. ಇದು ಉದ್ಯೋಗಿಗಳು ಕೆಲಸ ಮಾಡಿ ಸುಸ್ತಾದಾಗ ನಿಂತಲ್ಲೇ ಮಲಗಲು ಅನುವು ಮಾಡಿಕೊಡುತ್ತದೆ.
ಕಾಮಿನ್ ಬಾಕ್ಸ್ ಎಂದೂ ಕರೆಯಲ್ಪಡುವ ಈ ನ್ಯಾಪ್ ಬಾಕ್ಸ್‌ಗಳನ್ನು ಟೋಕಿಯೊ ಮೂಲದ ಕಛೇರಿ ಪೀಠೋಪಕರಣ ಪೂರೈಕೆದಾರ ಇಟೊಕಿ ಅಭಿವೃದ್ಧಿಪಡಿಸಿದ್ದಾರೆ. ಕೊಯೊಜು ಪ್ಲೈವುಡ್ ಕಾರ್ಪೊರೇಶನ್‌ನ ಸಹಯೋಗದೊಂದಿಗೆ ಇದನ್ನು ತಯಾರಿಸಲಾಗಿದೆ. ಈ ನ್ಯಾಪ್ ಬಾಕ್ಸ್‌ಗಳು ಹೆಚ್ಚು ಕೆಲಸ ಮಾಡುವ ಕಾರ್ಮಿಕರಿಗೆ ಶಿಫ್ಟ್ ಸಮಯದಲ್ಲಿ ತ್ವರಿತವಾಗಿ ನಿದ್ರೆ ಮಾಡಲು ಅವಕಾಶ ಮಾಡಿಕೊಡುತ್ತದೆ.
ವರದಿಯ ಪ್ರಕಾರ, ಬಳಕೆದಾರರು ಫ್ಲೆಮಿಂಗೊದಂತೆ ಪಾಡ್‌ನಲ್ಲಿ ನೇರವಾಗಿ ನಿಂತು ಮಲಗಬೇಕು. ಪೆಟ್ಟಿಗೆಯ ವಿನ್ಯಾಸವು ತಲೆ, ಮೊಣಕಾಲುಗಳು ಮತ್ತು ಬೆನ್ನಿನ ಎಲ್ಲಾ ಭಾಗಗಳು ಆರಾಮವಾಗಿ ಬೆಂಬಲಿತವಾಗಿದ್ದು, ವ್ಯಕ್ತಿ ಮೇಲೆ ಬೀಳದಂತೆ ನೋಡಿಕೊಳ್ಳುತ್ತದೆ.
ಬಹಳಷ್ಟು ಜಪಾನಿಯರು ಯಾವುದೇ ವಿರಾಮವಿಲ್ಲದೆ ನಿರಂತರವಾಗಿ ಕೆಲಸ ಮಾಡುತ್ತಾರೆ. ಕಂಪನಿಗಳು ಇದನ್ನು ವಿಶ್ರಾಂತಿಗೆ ಹೆಚ್ಚು ಹೊಂದಿಕೊಳ್ಳುವ ವಿಧಾನವಾಗಿ ಬಳಸಬಹುದು ಎಂದು ಭಾವಿಸುವುದಾಗಿ ಇಟೊಕಿ ಕಮ್ಯುನಿಕೇಷನ್ಸ್‌ನ ನಿರ್ದೇಶಕರಾದ ಸೈಕೊ ಕವಾಶಿಮಾ ಹೇಳಿದ್ದಾರೆ.