ನವದೆಹಲಿ: ಕರ್ನಾಟಕ ಹೈಕೋರ್ಟ್ ಗೆ ಐವರು ಜಡ್ಜ್ ಗಳ ನೇಮಕಾತಿಗೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ಜಿಲ್ಲಾ ಕೋರ್ಟ್ ನ ಜಡ್ಜ್ ಗಳಿಗೆ ಹೈಕೋರ್ಟ್ ಜಡ್ಜ್ ಗಳಾಗಿ ಬಡ್ತಿ ನೀಡಲಾಗಿದೆ. ಐವರು ನ್ಯಾಯಾಧೀಶರಿಗೆ ಬಡ್ತಿ ನೀಡಿ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿದೆ.
ನ್ಯಾ. ಅನಿಲ್ ಭೀಮಸೇನ ಕತ್ತಿ, ನ್ಯಾ. ಗುರುಸಿದ್ದಯ್ಯ ಬಸವರಾಜ, ನ್ಯಾ. ಚಂದ್ರಶೇಖರ ಮೃತ್ಯುಂಜಯ ಜೋಶಿ, ನ್ಯಾ. ಉಮೇಶ ಮಂಜುನಾಥ ಭಟ್ ಅಡಿಗ, ನ್ಯಾ. ತಲಕಾಡು ಗಿರಿಗೌಡ ಶಂಕರಗೌಡರಿಗೆ ಹೈಕೋರ್ಟ್ ಜಡ್ಜ್ ಗಳಾಗಿ ಬಡ್ತಿ ನೀಡಲಾಗಿದೆ.
ಕರ್ನಾಟಕ ಹೈಕೋರ್ಟ್ ಗೆ ಮಂಜೂರಾದ 62 ಜಡ್ಜ್ ಹುದ್ದೆಗಳು ಇವೆ. ಸದ್ಯ 45 ಜಡ್ಜ್ ಗಳ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಣೆ ಮಾಡಲಾಗುತ್ತಿದ್ದು, ಬಡ್ತಿ ಪಡೆದು ಐವರು ನೇಮಕವಾದರೆ ಜಡ್ಜ್ ಗಳ ಸಂಖ್ಯೆ 50 ಕ್ಕೆ ಏರಿಕೆಯಾಗಲಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ನೇತೃತ್ವದಲ್ಲಿ ಮತ್ತು ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ಎ.ಎಂ. ಖಾನ್ವಿಲ್ಕರ್ ಅವರನ್ನು ಒಳಗೊಂಡ ಕೊಲಿಜಿಯಂ ಆಂಧ್ರಪ್ರದೇಶ ಹೈಕೋರ್ಟ್ ನ 7, ಅಲಹಾಬಾದ್ ಹೈಕೋರ್ಟ್ ನ 9 ಮತ್ತು ಕರ್ನಾಟಕ ಹೈಕೋರ್ಟ್ ನ 5 ನ್ಯಾಯಮೂರ್ತಿಗಳ ನೇಮಕಾತಿಗೆ ಶಿಫಾರಸುಗಳನ್ನು ಅನುಮೋದಿಸಿದೆ. ಜುಲೈ 19, 20 ರಂದು ನಡೆದ ಸಭೆಗಳಲ್ಲಿ ಮೂವರು ಸದಸ್ಯರ ಕೊಲಿಜಿಯಂ ಈ ನಿರ್ಧಾರ ಕೈಗೊಂಡಿದೆ.