ನವದೆಹಲಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಗೆ ತಡೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 26ಕ್ಕೆ ಮುಂದೂಡಿದೆ.
ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಸುಪ್ರೀಂ ಕೋರ್ಟ್ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನೋಟೀಸ್ ನೀಡಿದ್ದು, ಅಭಿಪ್ರಾಯ ತಿಳಿಸುವಂತೆ ಹೇಳಿದೆ. ಅಲ್ಲದೇ ವಿಚಾರಣೆ ಮುಗಿಯುವವರೆಗೂ ಚರ್ಚೆ ನಡೆಸದಂತೆ ಎರಡೂ ರಾಜ್ಯಗಳಿಗೂ ಸುಪ್ರೀಂ ಕೋರ್ಟ್ ಸೂಚಿಸಿದೆ.
ಕಳೆದ ವಾರ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ಡಿಪಿಆರ್ ಬಗ್ಗೆ ಚರ್ಚಿಸದಂತೆ ಸೂಚಿಸಲು ಸುಪ್ರೀಂ ಕೋರ್ಟ್ ನಲ್ಲಿ ಮನವಿ ಮಾಡಿತ್ತು. ಈ ಬಗ್ಗೆ ಕಿಡಿಕಾರಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸರ್ಕಾರಕ್ಕೆ ಸೂಚಿಸುವಂತೆ ತಮಿಳುನಾಡು ಮನವಿ ಮಾಡಿ ಅರ್ಜಿ ಸಲ್ಲಿಸಿದ್ದು ಸರಿಯಾದ ಕ್ರಮವಲ್ಲ. ಸುಪ್ರೀಂ ಕೋರ್ಟ್ ಆದೇಶದ ಅನ್ವಯದಂತೆ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ರಚನೆಯಾಗಿದೆ. ಕಾವೇರಿ ನದಿಗೆ ಸಂಬಂಧಿಸಿದಂತೆ ಯಾವ ಯೋಜನೆ ಜಾರಿಗೆ ತರಬೇಕು ಯಾವುದು ತರಬಾರದು ಎಂದು ನಿರ್ಧರಿಸುವ ಅಧಿಕಾರ ಪ್ರಾಧಿಕಾರಕ್ಕಿದೆ ಎಂದು ಹೇಳಿದರು.