ರಾಂಚಿ: ಆಘಾತಕಾರಿ ಘಟನೆಯೊಂದರಲ್ಲಿ ವಾಹನ ತಪಾಸಣೆ ವೇಳೆ ತೂಪುಡಾನ ಒಪಿಯ ಪ್ರಭಾರಿಯಾಗಿ ನಿಯೋಜನೆಗೊಂಡ ಮಹಿಳಾ ಸಬ್ ಇನ್ಸ್ ಪೆಕ್ಟರ್ ಅವರನ್ನು ವಾಹನ ಹತ್ತಿಸಿ ಕೊಲೆ ಮಾಡಲಾಗಿದೆ.
ರಾಂಚಿಯಲ್ಲಿ ಮುಂಜಾನೆ 3 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಸುಳಿವಿನ ಮೇರೆಗೆ ಸಬ್ ಇನ್ಸ್ ಪೆಕ್ಟರ್ ವಾಹನ ತಪಾಸಣೆಗೆ ತೆರಳಿದ್ದರು. ಅಪರಾಧದಲ್ಲಿ ಭಾಗಿಯಾಗಿರುವ ಶಂಕಿತನನ್ನು ಬಂಧಿಸಲಾಗಿದೆ ಎಂದು ರಾಂಚಿ ಎಸ್.ಎಸ್.ಪಿ. ಮಾಹಿತಿ ನೀಡಿದ್ದಾರೆ.
ಸಂಧ್ಯಾ ಟಾಪ್ನೋ ಮೃತ ಇನ್ಸ್ ಪೆಕ್ಟರ್. ಆಕೆ 2018ರ ಬ್ಯಾಚ್ ನ ಅಧಿಕಾರಿಯಾಗಿದ್ದಾರೆ. ಪಿಕಪ್ ವ್ಯಾನ್ ನಿಂದ ಡಿಕ್ಕಿಹೊಡೆಸಿದ್ದರಿಂದ ನಜ್ಜುಗುಜ್ಜಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪಿಕಪ್ ವ್ಯಾನ್ ಅನುಮಾನಾಸ್ಪದ ವಸ್ತುಗಳನ್ನು ಸಾಗಿಸುತ್ತಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತು. ಸಬ್ ಇನ್ಸ್ ಪೆಕ್ಟರ್ ಪಿಕಪ್ ವ್ಯಾನ್ ಅನ್ನು ಚೆಕ್ ಪೋಸ್ಟ್ ನಲ್ಲಿ ನಿಲ್ಲಿಸಲು ಹೇಳಿದರೂ, ಚಾಲಕ ಪಿಕಪ್ ವ್ಯಾನ್ ನಿಲ್ಲಿಸಿಲ್ಲ. ಸಂಧ್ಯಾ ಟಾಪ್ನೋ ಪಿಕಪ್ ವ್ಯಾನ್ ಮುಂದೆ ಬಂದಿದ್ದಾರೆ. ಚಾಲಕ ವಾಹನ ನಿಲ್ಲಿಸದೆ ಆಕೆಯ ಮೇಲೆ ವಾಹನಹರಿಸಿದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ.
ಮೂಲಗಳ ಪ್ರಕಾರ, ಚೆಕ್ ಪೋಸ್ಟ್ ನಲ್ಲಿ ಯಾವುದೇ ಬ್ಯಾರಿಕೇಡ್ ಗಳಿರಲಿಲ್ಲ. ಸಂಧ್ಯಾ ಟಾಪ್ನೋ ತನ್ನ ವಾಹನದಿಂದ ಇಳಿದು ಅನುಮಾನಾಸ್ಪದ ಪಿಕಪ್ ವ್ಯಾನ್ ನಿಲ್ಲಿಸಲು ಪ್ರಯತ್ನಿಸಿದ್ದರು ಎನ್ನಲಾಗಿದ್ದು, ರಾಂಚಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹರಿಯಾಣದಲ್ಲಿ ನಿನ್ನೆ ಅಕ್ರಮ ಗಣಿಗಾರಿಕೆ ದಂಧೆ ತಡೆಯಲು ಹೋಗಿದ್ದ ಪೊಲೀಸ್ ಅಧಿಕಾರಿ ಮೇಲೆ ಟ್ರಕ್ ಹತ್ತಿಸಿ ಹತ್ಯೆ ಮಾಡಲಾಗಿತ್ತು.