ಗರ್ಭಪಾತವಾಗುವ ಮಾತ್ರೆ ತಿಂದ ಪರಿಣಾಮ ಗರ್ಭಿಣಿ ಮೃತರಾದ ಘಟನೆ ಉತ್ತರ ಪ್ರದೇಶದ ಔರೆೈಯಾ ಜಿಲ್ಲೆಯ ಬಿದುನಾ ಪ್ರದೇಶದಲ್ಲಿ ನಡೆದಿದೆ.
ಪತಿಯಿಂದ ಗರ್ಭಪಾತಕ್ಕೆ ಔಷಧಿ ನೀಡಲ್ಪಟ್ಟಿದ್ದು, ಗರ್ಭಿಣಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಪತಿ ಹಾಗೂ ಆತನ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆಯ ಪೋಷಕರು ಆಗ್ರಹಿಸಿದ್ದಾರೆ.
ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯಿಂದ ಮಹಿಳೆಯ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ. ಮಹಿಳೆಗೆ ಬಲವಂತವಾಗಿ ಗರ್ಭಪಾತದ ಔಷಧ ನೀಡಿರುವುದು ಸಾಬೀತಾದರೆ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
27 ವರ್ಷದ ಗೀತಾ ಯಾದವ್ ಅವರು ಆರು ವರ್ಷಗಳ ಹಿಂದೆ ವಿಪಿನ್ ಯಾದವ್ ಅವರನ್ನು ವಿವಾಹವಾಗಿದ್ದರು. ಇಬ್ಬರಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. ಘಟನೆ ನಡೆದಾಗ ಗೀತಾ ಐದು ತಿಂಗಳ ಗರ್ಭಿಣಿ.
ಆಕೆಯ ಪೋಷಕರ ಪ್ರಕಾರ ಆಕೆಯ ಪತಿ ಗೀತಾಗೆ ಗರ್ಭಪಾತದ ಔಷಧಿಯನ್ನು ನೀಡಿದ್ದು, ಇದು ಅತಿಯಾದ ರಕ್ತಸ್ರಾವಕ್ಕೆ ಕಾರಣವಾಯಿತು. ಸಂಬಂಧಿಕರು ಆಕೆಯನ್ನು ನೌಬಸ್ತಾದಲ್ಲಿರುವ ನರ್ಸಿಂಗ್ ಹೋಮ್ಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವಳನ್ನು ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕಳುಹಿಸಿದರು. ಅಷ್ಟರಲ್ಲಿ ಮೃತಳಾಗಿದ್ದಳು.