ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಮನೆ ಕುಸಿದು, ಮನೆಯೊಳಗಿದ್ದ ಮಹಿಳೆ ಮತ್ತು ಆಕೆಯ ಏಳು ವರ್ಷದ ಮಗಳು ಸಾವನ್ನಪ್ಪಿದ್ದಾರೆ. ಇನ್ನೂ ಉಳಿದ ಮೂವರು ಕುಟುಂಬ ಸದಸ್ಯರು ಗಾಯಗೊಂಡಿದ್ದಾರೆ, ಎಂದು ಅಧಿಕಾರಿಗಳು ಹೇಳಿದ್ಧಾರೆ.
ನಾಗ್ಪುರದಿಂದ 150 ಕಿ.ಮೀ ದೂರದಲ್ಲಿರುವ ಜಿಲ್ಲೆಯ ಚಂದೂರ್ ಬಜಾರ್ ತಾಲೂಕಿನ ಫುಬ್ಗಾಂವ್ ಗ್ರಾಮದಲ್ಲಿ ಬೆಳಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ. ಅಮರಾವತಿಯಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಒಂದೇ ಸಮನೆ ಸುರಿಯುತ್ತಿರುವ ಮಳೆಗೆ ಹಳೆಯ ಮನೆಯೊಂದು ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಮನೆಯೊಳಗೆ ಐದು ಜನ ಸದಸ್ಯರಿದ್ದರು. ಮನೆ ಕುಸಿದು ಬಿದ್ದಾಕ್ಷಣ ಅವರು ಅವಶೇಷಗಳಡಿಯಲ್ಲಿ ಹೂತು ಹೋಗಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ನೆರೆಹೊರೆಯವರು ಗಾಯಗೊಂಡ ಮೂವರು ಕುಟುಂಬ ಸದಸ್ಯರನ್ನು ಅವಶೇಷಗಳ ಅಡಿಯಿಂದ ಹೊರ ತೆಗೆದು ರಕ್ಷಿಸಿದ್ದಾರೆ.
35 ವರ್ಷದ ಮಹಿಳೆ ಮತ್ತು ಆಕೆಯ ಏಳು ವರ್ಷದ ಮಗಳನ್ನ ರಕ್ಷಿಸಲು ಸಾಧ್ಯವಾಗಿಲ್ಲ. ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಸದ್ಯಕ್ಕೆ ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಸಿದು ಬಿದ್ದ ಮನೆ ಹಳೆಯದಾಗಿದ್ದು, ಈ ಅವಘಡ ಸಂಭವಿಸಿದೆ ಅಂತ ಹೇಳಲಾಗುತ್ತಿದೆ.