ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ -2022 ಈ ಬಾರಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ದಸರಾ ಆಚರಣೆ ಸಂಬಂಧ ನಡೆದ ಸಭೆಯ ನಂತರ ಮಾತನಾಡಿದ ಅವರು, ಸೆಪ್ಟಂಬರ್ 26 ರಿಂದ ನವರಾತ್ರಿ ಉತ್ಸವ ಆರಂಭವಾಗಲಿದೆ. ಅಕ್ಟೋಬರ್ 5ರಂದು ವಿಜಯದಶಮಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಆಗಸ್ಟ್ 7 ರಂದು ಗಜ ಪಯಣ ಆರಂಭವಾಗಲಿದೆ ಎಂದರು.
ಈ ಬಾರಿ ದಸರಾ ಬಗ್ಗೆ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತೇವೆ. ದಸರಾ ಬ್ರಾಂಡ್ ನೇಮ್ ಆಗಬೇಕು. ಮುಂಬೈ ಸೇರಿದಂತೆ ಮೆಟ್ರೋ ಪಾಲಿಟನ್ ನಗರಗಳಲ್ಲಿ ದಸರಾ ಪ್ರಚಾರ ನಡೆಸಲಾಗುತ್ತದೆ. ದಸರಾ ವಸ್ತು ಪ್ರದರ್ಶನ 15 ದಿನ ಮೊದಲೇ ಆರಂಭಿಸಲು ಸೂಚನೆ ನೀಡಲಾಗಿದೆ. ಈ ಬಾರಿ ದಸರಾ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಚಾಮರಾಜನಗರ, ಶ್ರೀರಂಗಪಟ್ಟಣದಲ್ಲಿಯೂ ವೈಭವದ ದಸರಾ ಹಮ್ಮಿಕೊಳ್ಳಲಾಗುವುದು. ಮೈಸೂರು, ಹಂಪಿ ಟೂರಿಸ್ಟ್ ಸರ್ಕ್ಯೂಟ್ ಗೆ ಚಾಲನೆ ನೀಡಲಾಗುವುದು. ಈ ಬಾರಿ ದಸರಾಗೆ ‘ಮೂಡಾ’ ವತಿಯಿಂದ 10 ಕೋಟಿ ರೂಪಾಯಿ ನೀಡಲಾಗುತ್ತದೆ. ಕೆಲವಡೆ ಸಿಎಸ್ಆರ್ ಫಂಡ್ ಬಳಕೆಗೆ ತೀರ್ಮಾನ ಮಾಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.