ಜೈಪುರ: ಕಳೆದ ವಾರ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಪಾಕಿಸ್ತಾನಿ ವ್ಯಕ್ತಿಯೊಬ್ಬನನ್ನು ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಬಂಧಿಸಿದೆ ಎಂದು ಭದ್ರತಾ ಪಡೆ ಮಂಗಳವಾರ ಖಚಿತಪಡಿಸಿದೆ.
ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಮೇಲೆ ದಾಳಿ ನಡೆಸಲು ಬಂಧಿತ ವ್ಯಕ್ತಿ ಗಡಿ ದಾಟಿದ್ದ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿ 24 ವರ್ಷದ ರಿಜ್ವಾನ್ ಅಶ್ರಫ್ ನನ್ನು ಜುಲೈ 16 ರಂದು ರಾತ್ರಿ 11 ಗಂಟೆಗೆ ರಾಜಸ್ಥಾನದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಬಂಧಿಸಲಾಗಿದೆ.
ಶ್ರೀ ಗಂಗಾನಗರ ಸೆಕ್ಟರ್ ನ ಗಡಿ ಬೇಲಿ ಬಳಿಯಿಂದ ಬಿಎಸ್‌ಎಫ್ ಪಡೆಗಳು ಆತನನ್ನು ಬಂಧಿಸಿವೆ. ವರದಿಗಳ ಪ್ರಕಾರ, ಆತನಿಂದ ಎರಡು ಚಾಕುಗಳು, ಕೆಲವು ಧಾರ್ಮಿಕ ಸಾಹಿತ್ಯ ಮತ್ತು ಇತರ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಿಎಸ್‌ಎಫ್ ವಿಚಾರಣೆಯ ಸಮಯದಲ್ಲಿ, ಅಜ್ಮೀರ್ ಷರೀಫ್‌ಗೆ ಭೇಟಿ ನೀಡಲು ಬಯಸಿದ್ದರಿಂದ ಗಡಿಗೆ ಬಂದಿದ್ದೇನೆ ಎಂದು ಹೇಳಿದ್ದು, ನಂತರ, ಪ್ರವಾದಿ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ನೂಪುರ್ ಶರ್ಮಾ ಮೇಲೆ ದಾಳಿ ಮಾಡಲು ಬಯಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತನನ್ನು ಬಿಎಸ್‌ಎಫ್, ರಾಜಸ್ಥಾನ ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳನ್ನು ಒಳಗೊಂಡ ಜಂಟಿ ವಿಚಾರಣೆ ಸಮಿತಿಯು ವಿಚಾರಣೆ ನಡೆಸುತ್ತಿದೆ.