ಶಿವಮೊಗ್ಗ: ಸಿದ್ಧರಾಮಯ್ಯ ಸಮಾಜವಾದಿ, ಸರಳ ವ್ಯಕ್ತಿತ್ವ ವೈಭವೀಕರಣ ಮಾಡಲ್ಲ, ಹುಟ್ಟುಹಬ್ಬ ಆಚರಿಸಲ್ಲ ಎಂದು ಹೇಳುವ ಸಿದ್ಧರಾಮಯ್ಯನವರು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಯಾವ ದೊಡ್ಡ ಮಹಾಪುರುಷರೂ ಮಾಡದಂತೆ ಜನ್ಮದಿನದ ಕಾರ್ಯಕ್ರಮ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭಿನಂದಿಸುತ್ತೇನೆ. 80 ನೇ ವರ್ಷದ ಹುಟ್ಟಿದ ಹಬ್ಬವನ್ನು ಪ್ರವಾಹ ಪರಿಸ್ಥಿತಿ ಕಾರಣ ಆಚರಿಸಲ್ಲ ಎಂದು ಖರ್ಗೆಯವರು ಹೇಳಿದ್ದು, ಅವರನ್ನು ಅಭಿನಂದಿಸುತ್ತೇನೆ. ಸಿದ್ಧರಾಮಯ್ಯ ಹುಟ್ಟಿದ ಹಬ್ಬ ಆಚರಿಸಿಕೊಳ್ಳಲು ನನ್ನ ತಕರಾರು ಇಲ್ಲ. ಆದರೆ, ಸುಮಾರು 75 ಕೋಟಿ ರೂ. ಖರ್ಚು ಮಾಡಿ ಸಮಾಜವಾದಿ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಇದನ್ನು ನಾನು ಮಾಡುತ್ತಿಲ್ಲ. ನನ್ನ ಅಭಿಮಾನಿಗಳು ಮಾಡುತ್ತಿದ್ದಾರೆ ಎಂದು ಅವರು ಹೇಳುತ್ತಿರುವುದು ಸರಿಯಲ್ಲ ಎಂದರು.
ನಿನ್ನೆ ಬೆಂಗಳೂರಿನಲ್ಲಿ ನಡೆದ ಒಕ್ಕಲಿಗರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ನಲ್ಲಿ ಎಸ್.ಎಂ. ಕೃಷ್ಣ ನಂತರ ಯಾರೂ ನಮ್ಮಲ್ಲಿ ಮುಖ್ಯಮಂತ್ರಿಯಾಗಿಲ್ಲ. ಈಗ ಅವಕಾಶ ಒದಗಿ ಬಂದಿದೆ. ದಯವಿಟ್ಟು ಇದನ್ನು ಬಳಸಿಕೊಳ್ಳಬೇಕು. ಎಂದಿದ್ದಾರೆ. ಇದು ಜಾತಿವಾದವಲ್ಲವೇ ಎಂದು ಪ್ರಶ್ನಿಸಿದರು.
ಸಿದ್ಧರಾಮಯ್ಯ ಮತ್ತು ನಾನು ಎಲ್ಲಾ ಜಾತಿ ಧರ್ಮದವರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳುವ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.