ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ಎಂದು ಗುರುತಿಸಿಕೊಂಡಿರುವ ನವ್ಯಶ್ರಿ ರಾಮಚಂದ್ರರಾವ್ ವಿರುದ್ಧ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ಎಂಬುವವರು ಚೆನ್ನಪಟ್ಟಣ ಮೂಲದ ಕೈ ನಾಯಕಿ ನವ್ಯಶ್ರೀ ವಿರುದ್ಧ ದೂರು ದಾಖಲಿಸಿದ್ದು, ವಂಚನೆ, ಬ್ಲ್ಯಾಕ್ ಮೇಲ್ ಪ್ರಕರಣ ದಾಖಲಿಸಿದ್ದಾರೆ.
ಶಾಸಕ ಶ್ರೀಮಂತ ಪಾಟೀಲ್ ಅವರು ಈ ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ಬೆಳಗಾವಿಗೆ ಆಗಮಿಸಿದ್ದ ನವ್ಯಶ್ರೀ, ಆಗ ಸಚಿವರ ಪಿಎಸ್ ಆಗಿದ್ದ ರಾಜಕುಮಾರ್ ಅವರ ಪರಿಚಯ ಮಾಡಿಕೊಂಡಿದ್ದರು. ಪರಿಚಯದಿಂದ ಇಬ್ಬರ ನಡುವೆ ಸ್ನೇಹ ಇತ್ತು. ಆದರೆ ಕೆಲ ದಿನಗಳಲ್ಲೇ ಇಬ್ಬರ ನಡುವೆ ಮನಸ್ತಾಪ ಆರಂಭವಾಗಿ, ನವ್ಯಶ್ರೀ ರಾಜಕುಮಾರ್ ವಿರುದ್ಧ ಬೆಳಗಾವಿ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದರು. ಇಬ್ಬರ ನಡುವೆ ರಾಜಿ ಸಂಧಾನ ನಡೆಸಿ ಪ್ರಕರಣ ಅಲ್ಲಿಗೆ ನಿಂತಿತ್ತು.
ಇದೀಗ ರಾಜಕುಮಾರ್ ಟಾಕಳೆ ನವ್ಯಶ್ರೀ ವಿರುದ್ಧ ಬ್ಲ್ಯಾಕ್ ಮೇಲ್ ಹಾಗೂ 2 ಲಕ್ಷ ರೂಪಾಯಿ ಹಣ ಪಡೆದಿರುವ ಬಗ್ಗೆ ದೂರು ದಾಖಲಿಸಿದ್ದು, ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ನವ್ಯಶ್ರೀ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.