ಚಿಕ್ಕಮಗಳೂರು: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಈ ನಡುವೆ ಜಿಲ್ಲೆಯ ಕೊಗ್ರೆ ಸೇತುವೆ ಕುಸಿದು ಬಿದ್ದಿದ್ದು, ಈ ಭಾಗದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಭಾರಿ ಮಳೆಯಿಂದಾಗಿ ಕೊಗ್ರೆ ಸೇತುವೆ ಸಂಪೂರ್ಣ ಕುಸಿದುಬಿದ್ದಿದ್ದು, ಶೃಂಗೇರಿಯಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಬೈಪಾಸ್ ಮಾರ್ಗ ಬಂದ್ ಆಗಿದೆ. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಹಲವು ಗ್ರಾಮಗಳು ಸಂಕಷ್ಟಕ್ಕೀಡಾಗಿವೆ.
ಕಳೆದ ವರ್ಷವೂ ಭಾರಿ ಮಳೆಗೆ ಸೇತುವೆ ಕುಸಿದಿತ್ತು. ಇದೀಗ ಮತ್ತೆ ಕೊಗ್ರೆ ಸೇತುವೆ ಕುಸಿತಗೊಂಡಿದ್ದು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ, ಗುಡ್ಡ ಕುಸಿತ ಸಂಭವಿಸುತ್ತಿದೆ.