ಬೆಂಗಳೂರು: ಎನ್ ಡಿ ಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ರಬ್ಬರ್ ಸ್ಟ್ಯಾಂಪ್ ಎಂದು ಹಣೆಪಟ್ಟಿ ಕಟ್ಟುವ ಮೂಲಕ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಅವಮಾನ ಮಾಡಿದರು. ಆದರೆ ದ್ರೌಪದಿ ಮುರ್ಮು ಅವರು ಗೆಲುವಿನಲ್ಲಿ ದಾಖಲೆ ನಿರ್ಮಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಆದಿವಾಸಿ ಮಹಿಳೆ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾರೆ. ಅವರನ್ನು ರಬ್ಬರ್ ಸ್ಟ್ಯಾಂಪ್ ಎಂದವರು ರಾಷ್ಟ್ರದ ಕ್ಷಮೆಯಾಚಿಸಬೇಕು. ಈಗಾಗಲೇ ಅವರು ತಮ್ಮ ಸಾಮರ್ಥ್ಯ ತೋರಿಸಿದ್ದಾರೆ ಎಂದರು.
ಆದಿವಾಸಿ ಮಹಿಳೆಯನ್ನು ವಿರೋಧಿಸಿದ್ದಕ್ಕೆ ಸಿದ್ದರಾಮಯ್ಯ ಮುಖವಾಡ ಈಗ ಕಳಚಿಬಿದ್ದಿದೆ. ಸಿದ್ದರಾಮಯ್ಯನವರೇ ಈಗ ನಿಮ್ಮ ಅಹಿಂದ ಟ್ರಂಪ್ ಕಾರ್ಡ್ ಎಲ್ಲಿ ಹೋಯ್ತು? ಆದಿವಾಸಿ, ಅಲ್ಪಸಂಖ್ಯಾತ, ದಲಿತರ ಪರ ಎಂದಿದ್ದ ಸಿದ್ದರಾಮಯ್ಯ ಅವರ ಮುಖವಾಡ ಈಗ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಆಹಾರ ಪದಾರ್ಥಗಳ ಮೇಲೆ ಜಿಎಸ್ ಟಿ ಹೆಚ್ಚಿಸಿರುವ ವಿಚಾರವಾಗಿ ಮಾತನಾಡಿದ ಸಿ.ಟಿ.ರವಿ, ಜಿಎಸ್ ಟಿ ಏಕಪಕ್ಷೀಯ ನಿರ್ಧಾರವಲ್ಲ. ಇದು ಕೌನ್ಸಿಲ್ ತೀರ್ಮಾನ. ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಕೌನ್ಸಿಲ್ ನಲ್ಲಿದ್ದಾರೆ. ಅವರ ಅಭಿಪ್ರಾಯದ ಮೇರೆಗೆ ಜಿಎಸ್ ಟಿ ಹೆಚ್ಚಿಸಲಾಗಿದೆ ಎಂದು ಸಮರ್ಥಿಸಿಕೊಂಡರು.