
ನವದೆಹಲಿ: ಫ್ಯಾಕ್ಟರಿ ಮ್ಯಾನೇಜರ್ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಆಕೆಯ ಬಾಯಿಗೆ ಆಸಿಡ್ ಸುರಿದ ಘಟನೆ ನಡೆದಿದೆ.
15 ವರ್ಷದ ಬಾಲಕಿಯ ಮೇಲೆ ಆಕೆ ಕೆಲಸ ಮಾಡುತ್ತಿದ್ದ ಕಾರ್ಖಾನೆಯೊಂದರ ಮ್ಯಾನೇಜರ್ ಅತ್ಯಾಚಾರವೆಸಗಿದ್ದಾನೆ. ಆಕೆಗೆ ಬಲವಂತವಾಗಿ ಆಸಿಡ್ ಕುಡಿಸಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪ್ರಕರಣದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ಜೈ ಪ್ರಕಾಶ್(31) ಎಂಬಾತನನ್ನು ಬಂಧಿಸಲಾಗಿದೆ. ಜುಲೈ 2 ರಂದು ಪ್ರಕಾಶ್ ತನ್ನ ಅನಾರೋಗ್ಯದ ಪತ್ನಿಯನ್ನು ಭೇಟಿ ಮಾಡುವ ನೆಪದಲ್ಲಿ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆದಿದ್ದಾನೆ. ನಂತರ ಆತ ತನ್ನ ಪತ್ನಿಯ ಜತೆಗೂಡಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಕೆಲವು ದಿನಗಳ ನಂತರ, ಮನೆಗೆ ಹೋಗುತ್ತಿದ್ದಾಗ ಸಂತ್ರಸ್ತೆಯನ್ನು ತಡೆದು ಅವಳ ಬಾಯಿಗೆ ಆಸಿಡ್ ತರಹದ ದ್ರವವನ್ನು ಸುರಿದಿದ್ದಾನೆ. ಮನೆಗೆ ತಲುಪಿದ ನಂತರ ಅವಳು ಪ್ರಜ್ಞೆ ಕಳೆದುಕೊಂಡಿದ್ದು, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(AIIMS) ಗೆ ದಾಖಲಿಸಲಾಯಿತು. ಗಂಭೀರ ಸ್ಥಿತಿಯಲ್ಲಿದ್ದಾಳೆ ಎಂದು ಉಪ ಪೊಲೀಸ್ ಆಯುಕ್ತ ಸಮೀರ್ ಶರ್ಮಾ ತಿಳಿಸಿದ್ದಾರೆ.
ಶನಿವಾರ ಎನ್.ಜಿ.ಒ. ಸದಸ್ಯರೊಬ್ಬರ ಸಮ್ಮುಖದಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ನಂಗ್ಲೋಯ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೆಹಲಿ ಮಹಿಳಾ ಆಯೋಗವು (ಡಿಸಿಡಬ್ಲ್ಯು) ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ನೋಟಿಸ್ ನೀಡಿದೆ.