ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮುಂದಿಟ್ಟುಕೊಂಡು ರಸ್ತೆಯಲ್ಲಿ ವಾಹನ ತಡೆದು ದಾಖಲೆಗಳನ್ನು ಪರಿಶೀಲಿಸಿ ಜನರಿಗೆ ತೊಂದರೆ ಕೊಡದಂತೆ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ಮತ್ತೆ ಆದೇಶಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆಯ ನೆಪದಲ್ಲಿ ವಾಹನಗಳನ್ನು ತಡೆಯುತ್ತಿರುವ ಪೊಲೀಸರ ಕುರಿತಾಗಿ ಡಿಜಿಪಿಯವರಿಗೆ ದೂರುಗಳು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಮತ್ತೆ ಆದೇಶ ನೀಡಲಾಗಿದೆ. ವಾಹನಗಳನ್ನು ತಡೆದು ಜನರಿಗೆ ಅನಗತ್ಯವಾಗಿ ತೊಂದರೆ ಕೊಡಬೇಡಿ. ಕಣ್ಣಿಗೆ ಕಾಣುವಂತೆ ಸಂಚಾರ ನಿಯಮ ಉಲ್ಲಂಘಿಸದೆ ಹೋದರೆ ಆ ವಾಹನಗಳನ್ನು ತಡೆಯುವಂತಿಲ್ಲ. ಸಕಾರಣ ಇಲ್ಲದೆ ದಾಖಲೆಗಳನ್ನು ಪರಿಶೀಲಿಸುವಂತಿಲ್ಲ ಎಂದು ಡಿಜಿಪಿ ಸೂಚಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಆದರೂ ಕೆಲವು ಕಡೆ ಮತ್ತೆ ವಾಹನಗಳನ್ನು ಪೊಲೀಸರು ಅಡ್ಡಗಟ್ಟುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಮತ್ತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.