ಬೇಸಿಗೆಯಲ್ಲಿ ಮಾರುಕಟ್ಟೆಗಳು ರುಚಿಕರ ಮತ್ತು ಪೌಷ್ಟಿಕ ಹಣ್ಣುಗಳು, ತರಕಾರಿಗಳಿಂದ ತುಂಬಿರುತ್ತವೆ. ಅವುಗಳಲ್ಲೊಂದು ಕರಬೂಜ. ಈ ಹಣ್ಣಿನ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪೌಷ್ಠಿಕಾಂಶ ಭರಿತ ಈ ಹಣ್ಣಿನಲ್ಲಿ ಸಾಕಷ್ಟು ನೀರಿನ ಅಂಶವಿದೆ. ಬೇಸಿಗೆಯಲ್ಲಿ ನಿಮ್ಮ ದೇಹವನ್ನು ಇದು ತಂಪಾಗಿಡುತ್ತದೆ.
ಕರಬೂಜದ ಹಣ್ಣು ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ಫೈಬರ್‌ನ ಉತ್ತಮ ಮೂಲವಾಗಿದೆ. ಆದ್ರೆ ಕರಬೂಜ ಸೇವನೆಯಿಂದ ತೂಕ ಹೆಚ್ಚುತ್ತದೆಯೋ ಇಲ್ಲವೋ ಎಂಬುದು ಬಹುಜನರನ್ನು ಕಾಡುವ ಅನುಮಾನ.
ಬೇಸಿಗೆಯಲ್ಲಿ ಕರಬೂಜ ಹಣ್ಣನ್ನು ತಿನ್ನುವುದು ಅತ್ಯಂತ ಸೂಕ್ತ. ಆದ್ರೆ ಅತಿಯಾಗಿ ಯಾವುದನ್ನೂ ಸೇವನೆ ಮಾಡುವುದು ಒಳ್ಳೆಯದಲ್ಲ. ಕರಬೂಜ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಇದೆ. ಇದು ಸಾಮಾನ್ಯವಾಗಿ ತೂಕವನ್ನು ಹೆಚ್ಚಿಸುವುದಿಲ್ಲ. ಆದರೆ ಅತಿಯಾಗಿ ಸೇವನೆ ಮಾಡಿದ್ರೆ ತೂಕ ಹೆಚ್ಚಾಗುವ ಸಾಧ್ಯತೆಯಿದೆ. ಕರಬೂಜ ಹಣ್ಣನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಇದರಿಂದಾಗಿ ನೀವು ಶೀತ, ಜ್ವರ ಮತ್ತು ಇತರ ವೈರಲ್ ಸೋಂಕುಗಳಿಗೆ ತುತ್ತಾಗುವುದಿಲ್ಲ. ಕರಬೂಜದಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ಕರಬೂಜ ಹಣ್ಣನ್ನು ತಿನ್ನುವುದರಿಂದ ದೃಷ್ಟಿ ಶಕ್ತಿ ಹೆಚ್ಚುತ್ತದೆ. ಕಣ್ಣಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.